ದಾವಣಗೆರೆ.ಮಾ.೨೭ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮದುವೆ ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡ, ಗ್ರಾಮಪಂಚಾಯಿತಿ ಕಾರ್ಯದರ್ಶಿ, ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕರು , ಅಂಗನವಾಡಿ ಮೇಲ್ವಿಚಾರಕರು , ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ , ಕ್ರೀಂ ಯೋಜನೆಯ ಸಂಯೋಜಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಸೇವಕರು ಮತ್ತು ಹೊಯ್ಸಳ ತಂಡದ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ದಾವಣಗೆರೆ ತಾಲೂಕಿನ ಗ್ರಾಮಪಂಚಾಯಿತಿಯ ಗ್ರಾಮವೊಂದರ ಅಪ್ರಾಪ್ತೆ ಯ ವಿವಾಹವು ಹರಿಹರ ತಾಲೂಕಿನ ಕೆ.ಬೇವಿನಹಳ್ಳಿ ಗ್ರಾಮದ 30 ವರ್ಷದ ವರನೊಂದಿಗೆ ಹಳೇಬಾತಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಅಪರಿಚಿತರೊಬ್ಬರು ಮಕ್ಕಳಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ಪಡೆದ ಮಕ್ಕಳ ಸಹಾಯವಾಣಿಯ ಕೊಲ್ಯಾಬ್ ಡಾನ್ ಬಾಸ್ಕೋದ ಸಂಯೋಜಕರಾದ ಕೊಟ್ರೇಶ್ ಟಿ. ಎಂ. ಮತ್ತು ಕಾರ್ಯಕರ್ತರಾದ ಮಂಜುಳಾ.ವಿ. ಇವರು ಬಾಲಕಿ ವಿದ್ಯಾಭ್ಯಾಸ ಮಾಡಿದ್ದ ಶಾಲೆಯಿಂದ ಜನ್ಮದಿನಾಂಕ ದೃಢೀಕರಣ ಪತ್ರ ಪಡೆದು ಪರಿಶೀಲಿಸಲಾಗಿ ಬಾಲಕಿಗೆ 17 ವರ್ಷ 4 ತಿಂಗಳೆಂದು ತಿಳಿಯಿತು. ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡವು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಾದ ಸೋಮಶೇಖರ್.ಎನ್, ಗ್ರಾಮ ಪಂಚಾಯಿತಿ ಕರವಸೂಲಿಗಾರ ರುದ್ರೇಶ್, ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕರಾದ ನಾಸೀರ್ ಅಹ್ಮದ್, ಅಂಗನವಾಡಿ ಮೇಲ್ವಿಚಾಕರಾದ ಶ್ರಿಮತಿ ಸುಮಂಗಲ, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಅರುಣ್ ಕುಮಾರ್ .ಬಿ.ಪಿ. ಕ್ರೀಂ ಯೋಜನೆಯ ಸಂಯೋಜಕರಾದ ಮಂಜಪ್ಪ.ಬಿ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಸೇವಕರಾದ ವೀರೇಶ್.ಕೆ. ಹಾಗೂ ಹರಿಹರ ಹೊಯ್ಸಳ ತಂಡದ ಪೊಲೀಸ್ ಅಧಿಕಾರಿಗಳಾದ ಮೈಕಲ್ ಅಂತೊನಿ, ಕೊಟ್ರೇಶ್.ಕೆ.ಎಂ. ಇವರೊಂದಿಗೆ ಬಾಲಕಿಯ ಮನೆಗೆ ಭೇಟಿ ನೀಡಿ ಬಾಲಕಿಯ ಪೋಷಕರೊಂದಿಗೆ ಅಪ್ರಾಪ್ತೆಯ ವಿವಾಹದ ಬಗ್ಗೆ ಚರ್ಚಿಸಲಾಗಿ ಈಗಾಗಲೇ ಬಂಧುಗಳಿಗೆಲ್ಲಾ ಲಗ್ನಪತ್ರಿಕೆಗಳನ್ನು ಹಂಚಿದ್ದಾಗಿದೆ.ನಮ್ಮ ಮರ್ಯಾದೆ ಪ್ರಶ್ನೆ ಇದೆ, ಮಗಳಿಗೆ ಮದುವೆ ಮಾಡಿ ಅವಳಿಗೆ18 ವರ್ಷ ತುಂಬಿದಮೇಲೆ ಗಂಡನ ಮನೆಗೆ ಕಳಿಸುತ್ತೇವೆಂದರು. ಮದುವೆ ಮಾಡಲು ಅವಕಾಶ ಕೊಡದ್ದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಬಾಲಕಿಯ ತಾಯಿ ಭಾವುಕಳಾದಳು.ಪೋಷಕರಿಗೆ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಹಾಗೂ ಕಾನೂನಿನ ಶಿಕ್ಷೆ ಬಗ್ಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹನುಮಂತಪ್ಪ ಇವರು ಸಮ್ಮುಖದಲ್ಲಿ ಅರಿವು ಮೂಡಿಸಿ, ಬಾಲಕಿಗೆ ಸೂಕ್ತ ಪೋಷಣೆ ಮತ್ತು ರಕ್ಷಣೆ ಕಲ್ಪಸುವ ಸಲುವಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲು ಸದರಿ ಸಮಿತಿಯ ಅಧ್ಯಕ್ಷರಾದ ರಾಮನಾಯ್ಕ.ವೈ.ಇವರ ಗಮನಕ್ಕೆ ತಂದು ಬಾಲಕಿಯನ್ನು ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲಿಸುವ ಮೂಲಕ ನಡೆಯಲಿದ್ದ ಬಾಲ್ಯವಿವಾಹವನ್ನು ತಡೆಯಲಾಗಿದೆ.