ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ: ಆರೋಪ ಸಾಬೀತು

ಮಂಗಳೂರು, ಸೆ.೨೫- ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ದರ್ಬೆ ರಸ್ತೆಯಿಂದ ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-೧ (ಪೊಕ್ಸೊ) ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ತೀರ್ಪು ನೀಡಿದ್ದಾರೆ.
ಬಂಟ್ವಾಳ ವಿಟ್ಲ ಕಸ್ಬಾ ಉಕ್ಕುಡದ ಬಾಲಕೃಷ್ಣ (೨೫) ಎಂಬಾತನ ವಿರುದ್ಧದ ಆರೋಪ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಸೆ.೨೭ರಂದು ಪ್ರಕಟಿಸುವ ಸಾಧ್ಯತೆ ಇದೆ. ೨೦೧೯ರ ಜುಲೈ ೨೫ರಂದು ಬೆಳಗ್ಗೆ ತನ್ನದೇ ಊರಿನ ಪರಿಚಿತ ಬಾಲಕಿಯು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಳು. ಆರೋಪಿ ಬಾಲಕೃಷ್ಣ ಸ್ನೇಹಿತ ಪರಶುರಾಮನ ಬೈಕ್‌ನಲ್ಲಿ ಆತನ ಸಹಕಾರದೊಂದಿಗೆ ಬಾಲಕಿಯನ್ನು ಅಪಹರಿಸಿದ. ಬಿ.ಸಿ.ರೋಡ್‌ವರೆಗೆ ಬೈಕ್‌ನಲ್ಲಿ ಕರೆದೊಯ್ದು ನಂತರ ಬಸ್‌ನಲ್ಲಿ ಮೂಡಬಿದ್ರೆ ನೆಲ್ಲಿಕಾರು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದೊಯ್ದ. ಅಲ್ಲಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಎಂದು ಆರೋಪಿಸಲಾಗಿತ್ತು. ನಂತರ ಆರೋಪಿಯು ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ದ. ಬಾಲಕಿ ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಬೆಂಗಳೂರಿನಲ್ಲಿ ಆರೋಪಿ ಮತ್ತು ಬಾಲಕಿಯನ್ನು ಕಂಡ ಪೊಲೀಸರು ಸಂಶಯಗೊಂಡು ವಿಚಾರಿಸಿದಾಗ ಅದು ವಿಟ್ಲ ಠಾಣೆಗೆ ಸಂಬಂಧಿಸಿದ ಪ್ರಕರಣ ಎನ್ನುವುದು ಬೆಳಕಿಗೆ ಬಂದಿತು. ನಂತರ ವಿಟ್ಲ ಪೊಲೀಸರು ಅವರಿಬ್ಬರನ್ನು ಕರೆತಂದಿದ್ದರು. ಅಂದಿನ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ೧೮ ಮಂದಿ ಸಾಕ್ಷಿದಾರರನ್ನು ವಿಚಾರಿಸಲಾಯಿತು. ಅಪಹರಣಕ್ಕೆ ಸಹಕರಿಸಿದ ಆರೋಪದಲ್ಲಿ ಪರಶುರಾಮನ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೊಕ್ಸೊ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದಾರೆ.