ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಪ್ರಕರಣ ಸಿಒಡಿ ತನಿಖೆಗೆ ಒಪ್ಪಿಸಲು ಸಿಎಂಗೆ ಹನಮಂತಪ್ಪ ಮನವಿ

ಬಳ್ಳಾರಿ ಮೇ26 :ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಗ್ರಾಮವೊಂದರಲ್ಲಿ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನೊಂದವರಿಗೆ ನ್ಯಾಯಕೊಡಿಸಲು ಪ್ರಕರಣವನ್ನು ಸಿ.ಒ.ಡಿಗೆ ಒಪ್ಪಿಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ದಲಿತ ಸಮುದಾಯದ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇವೆ. ಇದಕ್ಕೆ ನಿದರ್ಶನವೆಂಬಂತೆ ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಗ್ರಾಮವೊಂದರಲ್ಲಿ ದಲಿತ ಸಮುದಾಯದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಗೈದು ಅವರ ಕೈಕಾಲು ಕಟ್ಟಿ ನೀರಿಗೆ ಎಸೆದು ಕೊಲೆ ಮಾಡಲಾಗಿದೆ‌ ಎಂದು ಅಲ್ಲಿನ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅಲ್ಲದೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆತ್ಮಾಹತ್ಯೆ ಎಂದು ತಿರುಚಲಾಗಿದೆ ಎಂದು ದಲಿತ ಸಮುದಾಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳು ರಾಜಕೀಯ ಪ್ರಭಾವಿಗಳಾಗಿದ್ದು, ಪ್ರಕರಣವನ್ನು ದಿಕ್ಕುತಪ್ಪಿಸುವ ಸಾಧ್ಯತೆಯೂ ಇದೆ. ಇದರಿಂದ ಸ್ಥಳೀಯ ಪೊಲೀಸರ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ.ಕೂಡಲೇ ಈ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆಯೂ ಈ ರೀತಿಯ ಪ್ರಕರಣ ನಡೆದಿತ್ತು. ಆದ್ದರಿಂದ ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಒಡಿ ಗೆ ಒಪ್ಪಿಸಬೇಕು ಎಂದು ಸಮುದಾಯದ ಅನೇಕ ಸಂಘಟನೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿರುವುದು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಈಗಾಗಲೇ ಮೂಡುಗೆರೆ ಪಿಎಸ್ಐ ದಲಿತ ಸಮುದಾಯದ ಯುವಕನ ಮೇಲೆ ನಡಿಸಿದ ದೌರ್ಜನ್ಯದ ಪ್ರಕರಣವನ್ನು ಸಿ.ಒ.ಡಿಗೆ ಒಪ್ಪಿಸಲಾಗಿದೆ. ಅಂತೆಯೇ ಈ ಪ್ರಕರಣವನ್ನು ಸಹ ಸಿ.ಒ.ಡಿಗೆ ಒಪ್ಪಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಹೆಚ್.ಹನುಮಂತಪ್ಪ ಅವರು ಮನವಿ ಮಾಡಿದ್ದಾರೆ