ಅಪ್ರಾಪ್ತ ಪ್ರೇಮಿಗಳು ನೇಣಿಗೆ ಶರಣು !

ಆಲಮಟ್ಟಿ;ಮೇ.4: ಪ್ರೀತಿ ಮಾಯೆ,ಪ್ರೇಮ ಕುರುಡು.ಇದರ ಸೆಳೆತಕ್ಕೆ ಒಳಗಾದ ಮನಸ್ಸುಗಳು ತಮ್ಮದೇ ಹೊಸದೊಂದು ಲೋಕದಲ್ಲಿ ವಿಹರಿಸಿ ಸಂತಸಾನುಭವದಲ್ಲಿ ತೇಲುವುದುಂಟು. ತಮ್ಮ ಪವಿತ್ರ ಪ್ರೇಮಭಾವಕ್ಕೆ ಯಾರಾದರೂ ಅಡ್ಡಿಯಾದರೆ ಎಂಥ ನಿರ್ಧಾರಕ್ಕೂ ಹಿಂಜರಿವುದಿಲ್ಲ ಎಂಬುದುಕ್ಕೆ ಇಲ್ಲೊಂದು ತಾಜಾ ನಿರ್ದಶನ ಇದೆ. ಪ್ರೀತಿ ವೆಂಬ ಮಾಯಾಜಾಲದಲ್ಲಿ ಸಿಲುಕಿ ಮನಸ್ಸಿಗೆ ಮನಸ್ಸು ಕೊಟ್ಟು ಪ್ರೇಮಿಸುತ್ತಿದ್ದ ಈ ಯುವ ಜೋಡಿಗಳು ಪ್ರಾಣ ತೇಜಿಸಿ ಇಹಲೋಕ ಸೇರಿದ್ದಾರೆ. ಪ್ರೇಮಪಾಶದ ಕದಂಬಬಾಹುಗೆ ಅಪ್ರಾಪ್ತ ವಯಸ್ಸಿನ ಯುವ ಪ್ರೇಮಿಗಳು ನೇಣಿಗೆ ಶರಣಾಗಿ ಈ ಲೋಕಕ್ಕೆ ಗುಡ್ ಬೈ ಹೇಳಿ ಹೊರಟು ಹೋಗಿದ್ದಾರೆ.

ಆಲಮಟ್ಟಿಗೆ ಸಮೀಪದ ನಿಡಗುಂದಿ ತಾಲ್ಲೂಕಿನ ಅಂಗಡಗೇರಿ ಗ್ರಾಮದ ಹೊರ ವಲಯದ ಗದ್ದೆಯೊಂದರಲ್ಲಿ ಅಪ್ರಾಪ್ತ ಪ್ರೇಮಿಗಳು ಆತ್ಮಹತ್ಯೆಗೀಡಾದ ಪ್ರಸಂಗ ಬುಧವಾರ ಬೆಳಕಿಗೆ ಬಂದಿದೆ.

ಅಂಗಡಗೇರಿ ಗ್ರಾಮದ ಸಕ್ಕೂಬಾಯಿ ಮಾದರ (15) ಮತ್ತು ಬೀಳಗಿ ತಾಲ್ಲೂಕಿನ ಅರಕೇರಿ ಗ್ರಾಮದ ಸಚಿನ್ ಕೃಷ್ಣಪ್ಪ ನಡಗೇರಿ (17) ಆತ್ಮಹತ್ಯೆಗೀಡಾದ ಪ್ರೇಮಿಗಳು.

ಮೂಲತಃ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅರಕೇರಿ ಗ್ರಾಮದ ಸಚಿನ್ ನಡಗೇರಿ ಅಂಗಡಗೇರಿಯ ದೊಡ್ಡಮ್ಮನ ಮನೆಯಲ್ಲಿಯೇ ಹಲವು ತಿಂಗಳಿಂದ ವಾಸವಾಗಿದ್ದ. ಈ ನಡುವೆ ಸಚಿನ್ ಮತ್ತು ಸಕ್ಕೂಬಾಯಿ ನಡುವೆ ಪ್ರೇಮಾಂಕುರವಾಗಿದ್ದು ಮನೆಯವರಿಗೆ ಗೊತ್ತಾದರೆ ತಮ್ಮ ಪ್ರೀತಿಗೆ ಅಡ್ಡಗಾಲು ಹಾಕುವರೆಂದು ತಿಳಿದು ಇಬ್ಬರು ಸೇರಿ ಶನಿವಾರ ಮನೆ ಬಿಟ್ಟು ಹೊರ ಹೋಗಿದ್ದಾರೆ. ಬುಧವಾರ ಕೊನೆಗೂ ಊರಾಚೆಯ ಗದ್ದೆಯೊಂದರ ಮರದಲ್ಲಿ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ. ಕೂಡಗಿ ಎನ್‍ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.