ಅಪ್ರಾಪ್ತೆ ಶಂಕಾಸ್ಪದ ಸಾವು ಪ್ರಿಯಕರ ನೇಣಿಗೆ ಶರಣು

ಬೆಂಗಳೂರು, ನ.22-ಟಿಕ್ ಟಾಕ್‌ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್‌ಗಳಾಗಿದ್ದ ಪ್ರೇಮಿಗಳಲ್ಲಿ ಅಪ್ರಾಪ್ತೆ ಇಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬೆನ್ನಲ್ಲೇ ಪ್ರಿಯಕರ ನೇಣಿಗೆ ಶರಣಾಗಿರುವ ಘಟನೆ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಯಾಗಿದ್ದ ರಕ್ಷಿತಾ (17) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ.ಚಿಕ್ಕಸಂದ್ರದ ವರಮಹಾಲಕ್ಷ್ಮಿ ಮತ್ತು ಕೃಷ್ಣಪ್ಪನವರ ಪುತ್ರಿ ಮೃತ ರಕ್ಷಿತ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ಟಿಕ್ ಟಾಕ್‌ ವಿಡಿಯೋಗಳು ಸಖತ್ ವೈರಲ್ ಆಗಿದ್ದವು.
ಅಪ್ಪ-ಅಮ್ಮ ಮದುವೆಗೆಂದು ತೆರಳಿದ್ದಾಗ ಈಕೆ ಮನೆಯಲ್ಲಿ ನೇಣಿಗೆ ಶರಣಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಬಾಲಕಿಯ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದ ಬಾಲಕಿ ರಕ್ಷಿತಾ ಮತ್ತು ಮನೋಜ್ (20) ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ತಾನು ಪ್ರೀತಿಸುತ್ತಿದ್ದ ಹುಡುಗಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಮನೋಜ್‌ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತ ಯುವಕ ಯಲಹಂಕ ತಾಲೂಕಿನ ಹನಿಯೂರು ಗ್ರಾಮದ ನಿವಾಸಿಯಾಗಿದ್ದಾನೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.