ಅಪ್ರಾಪ್ತೆ ಅತ್ಯಾಚಾರಿಗೆ 20 ವರ್ಷ ಜೈಲು

ಕಲಬುರಗಿ,ಮಾ 31: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ( ವಿಸೇಷ ಪೋಕ್ಸೋ)ದ ನ್ಯಾಯಾಧೀಶರು ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ,20 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ಜೇವರಗಿ ತಾಲೂಕಿನ ನರಿಬೋಳದ ಮಹೇಶ ದೊಡ್ಡಮನಿ ಶಿಕ್ಷೆಗೊಳಗಾದವ.ಬಾಲಕಿಯು ಬಟ್ಟೆ ಒಗೆಯಲು ನದಿಗೆ ಹೋಗುತ್ತಿದ್ದಾಗ,ಜಮೀನಿನಲ್ಲಿ ಅತ್ಯಾಚಾರ ಎಸಗಿ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದನು.ಈ ಬಗ್ಗೆ ಗ್ರಾಮೀಣ ಉಪವಿಭಾಗದ ಉಪ ಅಧೀಕ್ಷಕರು ಪ್ರಕರಣದ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಹಂಪಮ್ಮ ಕಲ್ಮಠ ಅವರು ವಾದ ಮಂಡಿಸಿದ್ದರು.