ಅಪ್ರಾಪ್ತೆಯರ ಅತ್ಯಾಚಾರ: ಇಬ್ಬರಿಗೆ 20 ವರ್ಷ ಜೈಲು

ಕಲಬುರಗಿ,ಫೆ 5: ಅಪ್ರಾಪ್ತೆಯರ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ್ದರಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಫೋಕ್ಸೋ) ನ್ಯಾಯಾಲಯ ಇಬ್ಬರಿಗೆ ತಲಾ 20 ವರ್ಷ ಜೈಲು ಮತ್ತು 20 ಸಾವಿರ ರೂ ದಂಡ ವಿಧಿಸಿದೆ.
ಜಿಲ್ಲೆಯ ಗ್ರಾಮವೊಂದರ ಆರೋಪಿ ಸೈಬಣ್ಣ ಶರಣಪ್ಪ ಸೀಬಾ ಮತ್ತು ಇನ್ನೊಂದು ಗ್ರಾಮದ ಮಜರುದ್ದಿನ್ ಚಾಂದಪಾಶಾ ಜಮಾದಾರ ಶಿಕ್ಷೆಗೊಳಗಾದವರು.
2022 ರ ಸೆ.24 ರಂದು ಅಪ್ರಾಪ್ತ ಬಾಲಕಿಯು ಬಸ್ಸಿನಲ್ಲಿ ಕಾಲೇಜಿಗೆ ಬರುತ್ತಿದ್ದಾಗ ಸೈಬಣ್ಣ ಆಕೆಯನ್ನು ಮದುವೆಯಾಗುವದಾಗಿ ಪುಸಲಾಯಿಸಿ ಅಪಹರಿಸಿ ದೂರದ ಗ್ರಾಮದ ಹೊಲದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ಇನ್ನೊಂದು ಪ್ರಕರಣದಲ್ಲಿ 2021 ರ ಡಿಸೆಂಬರ್ ತಿಂಗಳಲ್ಲಿ ಅಪ್ರಾಪ್ತೆಯನ್ನು ಪುಸಲಾಯಿಸಿ
ಮಜರುದ್ದಿನ್‍ನು ಅತ್ಯಾಚಾರ ಎಸಗಿ, ವಿಷಯ ಜನರಿಗೆ ಹೇಳುವದಾಗಿ ಬೆದರಿಸಿ ಪದೇ ಪದೇ ಅತ್ಯಾಚಾರ ಎಸಗಿದ್ದು ಸಾಬೀತಾಗಿದೆ.
ಈ ಎರಡು ಪ್ರಕರಣಗಳ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಫೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಶಿಕ್ಷೆ ನೀಡಿ ಆದೇಶಿಸಿದ್ದಾರೆ.ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ತುಪ್ಪದ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.