ಅಪ್ರಾಪ್ತೆಗೆ ಮಾನಸಿಕ ಕಿರುಕುಳ ಆರೋಪ: ಯುವಕನ ಸೆರೆ


ಮಂಗಳೂರು, ಎ.೧೦- ಅಪ್ರಾಪ್ತೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಯುವಕನನ್ನು ಬಂದರ್ ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಪ್ರಾಪ್ತೆಗೆ ೨೦೨೦ರ ಡಿಸೆಂಬರ್‌ನಲ್ಲಿ ಬಂದರ್‌ನ ಅರಾಫ್ ಎಂಬಾತನ ಪರಿಚಯವಾಗಿತ್ತು. ಹಾಗೇ ಇಬ್ಬರು ಇನ್‌ಸ್ಟ್ರಾಗ್ರಾಮ್ ಮೂಲಕ ಪರಸ್ಪರ ಸಂದೇಶ ರವಾನಿಸುತ್ತಿದ್ದರು. ೨೦೨೧ರ ಜನವರಿಗೆ ಈ ವಿಷಯ ಅಪ್ರಾಪ್ತೆಯ ಮನೆಯವರಿಗೆ ಗೊತ್ತಾಗಿದ್ದು, ಅವರು ಹಿತವಚನ ನೀಡಿ ಸಂಪರ್ಕ ಕಡಿದು ಹಾಕುವಂತೆ ಸೂಚಿಸಿದ್ದರು. ಹಾಗಾಗಿ ಅಪ್ರಾಪ್ತೆ ಅರಾಫ್‌ನ ಸಂಪರ್ಕ ಕಡಿದು ಹಾಕಿದ್ದಳು. ಆದರೂ ಆರೋಪಿ ಅರಾಫ್ ಆಕೆ ಕಾಲೇಜಿಗೆ ಹೋಗಿ ಬರುವಾಗ ಹಿಂಬಾಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಲ್ಲದೆ ಎ.೮ರಂದು ಅಪ್ರಾಪ್ತೆಯ ಮನೆಗೆ ನುಗ್ಗಿ ಅವಾಚ್ಯ ಶಬ್ದದಿಂದ ಬೈದಿದ್ದ ಎಂದು ಬಂದರ್ ಠಾಣೆಗೆ ದೂರು ನೀಡಲಾಗಿತ್ತು. ಅದರಂತೆ ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದೆ.