ಅಪ್ರತಿಮ ಸಾಧನೆಗೈದ ಕಲಾವಿದ ಪಂ.ರಾಜಗುರು


ಧಾರವಾಡ.ಎ.7- ಕಲಾವಿದ ಮೇಣದ ಬತ್ತಿಯಂತೆ, ತನ್ನನ್ನು ಸುಟ್ಟುಕೊಂಡು ಸಮಾಜಕ್ಕೆ ಬೆಳಕನ್ನು ತೋರುತ್ತಾರೆ. ಅಂಥ ಮಹನೀಯರಲ್ಲಿ ಪಂ.ಬಸವರಾಜ ರಾಜಗುರು ಪ್ರಮುಖರು ಎಂದು ಹಿರಿಯ ಹಿಂದೂಸ್ಥಾನಿ ಸಂಗೀತಗಾರ ಪಂ.ಗಣಪತಿ ಭಟ್ ಹಾಸಣಗಿ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲಿ ಪಂ. ಬಸವರಾಜ ರಾಜಗುರು ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪಂ.ಬಸವರಾಜ ರಾಜಗುರು ಬದುಕಿನಲ್ಲಿ ಹಲವು ಕಷ್ಟ ಕಾರ್ಪಣ್ಯಗಳನ್ನು ಉಂಡು ಅಪ್ರತಿಮ ಸಾಧನೆ ಮಾಡಿದವರು. ಈ ನಾಡಿಗೆ ಸಂಗೀತ ಪರಂಪರೆಯ ಭಾಗವಾಗಿ ನೂರಾರು ಶಿಷ್ಯರನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
‘ನಾಡು, ನುಡಿಗಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ಪಂ.ಬಸವರಾಜ ರಾಜಗುರು ಮತ್ತು ಪಂ.ಭೀಮಸೇನ ಜೋಶಿ ಅವರ ನೆನಪಿನಲ್ಲಿ ಸಂಗೀತೋತ್ಸವ ಏರ್ಪಡಿಸಿರುವುದು ಸ್ತುತ್ಯಾರ್ಹ ಕೆಲಸ. ಧಾರವಾಡ ನೆಲದ ಈ ಸಾಂಸ್ಕøತಿಕ ಕಂಪು ಹೀಗೆ ಹರಡುತ್ತಿರಲಿ ಎಂದು ಆಶಿಸಿದರು.
ಡಾ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ‘ಧಾರವಾಡಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಹಲವಾರು ಸಂಗೀತ ದಿಗ್ಗಜರು ತಮ್ಮ ಸಾಧನೆಯ ಮೂಲಕ ಈ ನೆಲಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದು ಕೊಟ್ಟಿದ್ದಾರೆ. ಯುವ ಪೀಳಿಗೆ ಇಂಥ ಸಂಗೀತಗಾರರ ಬದುಕಿನಿಂದ ಪ್ರೇರಣೆ ಪಡೆದು, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ವೇದಿಕೆಯಲ್ಲಿ ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ, ನಿಜಗುಣಿ ರಾಜಗುರು ಇದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರ ಕುಂಬಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದಿಂದ ಭಾರತಿದೇವಿ ರಾಜಗುರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವೇಶ್ವರಿ ಹಿರೇಮಠ, ಸತೀಶ ತುರಮರಿ ಹಾಗೂ ಖ್ಯಾತ ತಬಲಾ ವಾದಕಿ ರಿಂಪಾ ಸಿವಾ, ಪ್ರಭು ಹಂಚಿನಾಳ, ಬಸವರಾಜ ಮುರಗೋಡ, ಮಹಾಂತೇಶ ನರೇಗಲ್, ವೀರಣ್ಣ ಒಡ್ಡೀನ, ಜಯಶ್ರೀ ಪಾಟೀಲ, ಸುಪ್ರಿಯಾ ಭಟ್ ಮತ್ತಿತರರು ಸೇರಿದಂತೆ ಸಂಗೀತ ಪ್ರೇಮಿಗಳು ಭಾಗವಹಿಸಿದ್ದರು.
ನಂತರ ಕೊಲ್ಕತ್ತಾದ ಪ್ರತಿಭಾವಂತ ತಬಲಾವಾದಕಿ ರಿಂಪಾ ಸಿವಾ ಅವರ ತಬಲಾ ಸೋಲೊ ನಡೆಯಿತು. ಬೆಂಗಳೂರಿನ ಸತೀಶ ಕೊಳ್ಳಿ ಸಂವಾದಿನಿ ಸಾಥ್ ನೀಡಿದರು. ಅದಾದ ನಂತರ ಹಿರಿಯ ಗಾಯಕ ಪಂ.ಗಣಪತಿ ಭಟ್ ಹಾಸಣಗಿ ಅವರ ಶಾಸ್ತ್ರೀಯ ಗಾಯನ ಪ್ರಸ್ತುತಗೊಂಡಿತು. ಸತೀಶ ಕೊಳ್ಳಿ ಹಾರ್ಮೋನಿಯಂ ಸಾಥ್ ಮತ್ತು ಶ್ರೀಧರ ಮಾಂಡ್ರೆ ತಬಲಾ ಸಾಥ್ ನೀಡಿದರು