ಅಪ್ರತಿಮ ದೇಶಭಕ್ತ ಬಾಲಗಂಗಾಧರ ತಿಲಕ್

ಕಲಬುರಗಿ,ಆ.1: ‘ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು’ ಎಂದು ಸಾರಿ ಬ್ರಿಟಿಷರ ವಿರುದ್ಧ ಹೋರಾಡಿದ ಬಾಲ ಗಂಗಾಧರ ತಿಲಕರು ಪ್ರಖರ ರಾಷ್ಟ್ರವಾದಿ, ಅಧ್ಯಾತ್ಮವಾದಿ, ಜನನಾಯಕ, ಆಧುನಿಕ ಭಾರತದ ರೂಪುರೇಷೆಯ ತಯಾರಕ, ಲೇಖಕರಾಗಿ ಬಹುಮುಖ ವ್ಯಕಿತ್ವವನ್ನು ಹೊಂದಿದ್ದ ಅಪ್ರತಿಮ ದೇಶಭಕ್ತರಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಎಂ.ಎಂ.ಎನ್ ಟ್ಯೂಟೊರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಬಾಲ ಗಂಗಾಧರ ತಿಲಕ್’ರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
‘ಕೇಸರಿ’, ‘ಮರಾಠಾ’ ಪತ್ರಿಕೆಗಳ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದರು. ಜನತೆಯಲ್ಲಿ ಒಗ್ಗಟ್ಟು ಉಂಟುಮಾಡಲು ಸಾರ್ವಜನಿಕವಾಗಿ ಗಣೇಶ, ಶಿವಾಜಿ ಜಯಂತಿಗಳನ್ನು ಆಚರಿಸಲು ಪ್ರಾರಂಭಿಸಿದರು. ತಿಲಕರ್ ಹೋರಾಟದ ಪರಿಶ್ರಮ ವ್ಯರ್ಥವಾಗದಂತೆ, ಸ್ವಾತಂತ್ರ್ಯದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ವೇದಮೂರ್ತಿ ನೀಲಕಂಠಯ್ಯ ಹಿರೇಮಠ, ನರಸಪ್ಪ ಬಿರಾದಾರ ದೇಗಾಂವ, ಪರಮೇಶ್ವರ ಬಿ.ದೇಸಾಯಿ, ಬಸಯ್ಯಸ್ವಾಮಿ ಹೊದಲೂರ, ಸಿದ್ದರಾಮ ತಳವಾರ, ಬಸವರಾಜ ಮುನ್ನಳ್ಳಿ, ಸೋಮೇಶ ಡಿಗ್ಗಿ ಸೇರಿದಂತೆ ಇನ್ನಿತರರು ಇದ್ದರು.