ಅಪ್ರತಿಮ ಜನನಾಯಕ ಡಾ.ಬಾಬು ಜಗಜೀವನರಾಮ್

ಕಲಬುರಗಿ:ಎ.5: ಡಾ.ಬಾಬು ಜಗಜೀವನರಾಮ್ ಅವರು ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ. ಸ್ವಾತಂತ್ರ ನಂತರ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ, ಉಪ ಪ್ರಧಾನಿಯಾಗಿ, ವಿವಿಧ ಖಾತೆಯ ಸಚಿವರಾಗಿ, ರೈತರ, ಶೋಷಿತರ, ಬಡವರಿಗಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಮೂಲಕ ದೇಶ ಕಂಡ ಅಪ್ರತಿಮ ಜನನಾಯಕರಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆಂದು ಚಂದ್ರಪ್ರಭ ಕಮಲಾಪುರಕರ್ ಹೇಳಿದರು.

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ‘ಸರ್ಕಾರಿ ಪದವಿ ಪೂರ್ವ ಕಾಲೇಜ್’ನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಸೋಮವಾರ ಏರ್ಪಡಿಸಿದ್ದ, ‘ಡಾ.ಬಾಬು ಜಗಜೀವನರಾಮ್ ಅವರ 114ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಅರ್ಥಶಾಸ್ತ್ರ ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ಡಾ.ಜಗಜೀವನರಾಮ್ ಮೂಲತಃ ಕೃಷಿ ಕುಟುಂಬದವರಾಗಿದ್ದರಿಂದ, ಕೃಷಿಕರ, ಕಾರ್ಮಿಕರ ಪರಿಸ್ಥಿತಿಯನ್ನು ಬಾಲ್ಯದಿಂದಲೇ ಗಮನಿಸಿ, ಮುಂದೆ ಜೀವನದಲ್ಲಿ ರೈತಪರ, ಕಾರ್ಮಿಕರಪರ ಹೋರಾಟ ಮಾಡಲು ಸ್ಪೂರ್ತಿಯಾಯಿತು. ನಿರಂತರವಾದ ಹೋರಾಟದ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟರು. ಮಧ್ಯಪಾನ ಬಿಡಿಸಲು ಜನರಲ್ಲಿ ಸಾಕಷ್ಟು ಜನಜಾಗೃತಿಯನ್ನು ಮೂಡಿಸಿದರು. ಹಳ್ಳಿ-ಹಳ್ಳಿಗೂ ಸುತ್ತಾಡಿ ಜನರ ಕಷ್ಟಗಳಿಗೆ ಪರಿಹಾರವನ್ನು ದೊರೆಕಿಸಿಕೊಟ್ಟರೆಂದರು.

ಕೃಷಿ ಸಚಿವರಾಗಿ ರೈತರಿಗೆ ಕೃಷಿ ಸಾಲ, ಸಬ್ಸಿಡಿ ಮತ್ತು ಕನಿಷ್ಠ ಬೆಲೆಯಲ್ಲಿ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜಗಳನ್ನು ದೊರೆಯುವಂತೆ ಮಾಡಿದರು. ಕೃಷಿ ಉಪಕರಣಗಳ ಮೇಲಿನ ತೆರಿಗೆಯನ್ನು ರದ್ದು ಮಾಡಿ, ಅದರ ಬೆಲೆಯನ್ನು ಕಡಿಮೆಯಾಗುವಂತೆ ಮಾಡಿದರು. ಇವೆಲ್ಲವುದರ ಫಲವಾಗಿ ಭಾರತ ಆಹಾರ ಉತ್ಪಾದನೆಯ ಸಮಸ್ಯೆಯಿಂದ ಹೊರಬಂದು ಸಂಪೂರ್ಣವಾಗಿ ಸ್ವಾವಲಂಬನೆಯನ್ನು ಸಾಧಿಸಿ, ವಿದೇಶಿಗಳಿಗೆ ರಫ್ತು ಮಾಡುವಂತಾಯಿತು. ಇದಕ್ಕೆ ಕಾರಣೀಕರ್ತರಾದ ಅವರಿಗೆ ‘ಹಸಿರು ಕ್ರಾಂತಿಯ ಹರಿಕಾರ’ ಎಂಬ ಬಿರುದನ್ನು ರಾಷ್ಟ ನೀಡಿ ಗೌರವಿಸಿದೆ. ‘ಕನಿಷ್ಠ ವೇತನ ಕಾಯ್ದೆ’, ‘ನೌಕರರ ರಾಜ್ಯ ವಿಮಾ ಕಾಯ್ದೆ’, ‘ಭವಿಷ್ಯ ನಿಧಿ ಕಾಯ್ದೆ’, ‘ಬೋನಸ್ ಕಾಯ್ದೆ’ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದ್ದರಿಂದ ಭಾರತೀಯರ ಜನಮಾನಸದಲ್ಲಿಂದಿಗೂ ಅಚ್ಚಳಿಯದೇ ಉಳಿದಿದ್ದಾರೆಂದು ಅವರ ಕಾರ್ಯಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ರವೀಂದ್ರ ಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಮಂಜುನಾಥ ಎ.ಎಂ., ಪ್ರ.ದ.ಸ ನೇಸರ ಬೀಳಗಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಬಾಬುರಾಯ, ಬಸವರಾಜ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.