ಅಪ್ಪೇನಹಳ್ಳಿ ಪಿಡಿಓ ವಿರುದ್ದ ಗ್ರಾಪಂ ಅಧ್ಯಕ್ಷರು,ಸದಸ್ಯರು ಪ್ರತಿಭಟನೆ.

ಕೂಡ್ಲಿಗಿ.ಜೂ.6:- ಗ್ರಾಮ ಪಂಚಾಯ್ತಿ ಪಿಡಿಓ ಅಧ್ಯಕ್ಷರು ಮತ್ತು ಸದಸ್ಯರ ಜೊತೆ ಸಭ್ಯತೆಯಿಂದ ವರ್ತಿಸುತ್ತಿಲ್ಲ, 14 ದಿನಗಳಾದರೂ ಕಚೇರಿಗೆ ಬಂದಿಲ್ಲ, ಕೊರೋನಾ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಶನಿವಾರ ತಾಲೂಕಿನ ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಕಚೇರಿಗೆ ಬೀಗಹಾಕುವುದರ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಲತಾ ಮಾತನಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಎಂದು ಸಹ ಗೌರವ ನೀಡದೇ ವರ್ತಿಸುತ್ತಾರೆ, ಸದಸ್ಯರ ಮಾತಿಗೂ ಮನ್ನಣೆ ನೀಡುತ್ತಿಲ್ಲ, ಗ್ರಾಮ ಪಂಚಾಯ್ತಿ ಕಚೇರಿಗೆ ಸರಿಯಾಗಿ ಬರುತ್ತಿಲ್ಲ, ಯಾವುದೇ ಕೆಲಸಗಳು ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿಲ್ಲ, ಕೊರೋನಾ ತುರ್ತು ಸಂದರ್ಭದಲ್ಲಿ ಸಹ ಜನತೆಗೆ ಸಿಗುತ್ತಿಲ್ಲ ಇಂತಹ ಪಿಡಿಓ ನಮಗೇ ಬೇಡ ಸೂಕ್ತವಾಗಿ ಕರ್ತವ್ಯ ನಿರ್ವಹಿಸದೇ ಇರುವ ಪಿಡಿಓ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ ನಮ್ಮ ಗ್ರಾಮ ಪಂಚಾಯ್ತಿಯಲ್ಲಿ 19 ಸದಸ್ಯರಿದ್ದು ಎಲ್ಲರೂ ಒಕ್ಕೊರಲಿನಿಂದ ಪಿಡಿಓ ವಿರುದ್ದ ಪ್ರತಿಭಟನೆ ನಡೆಸಿದ್ದು ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ, ಗ್ರಾಮ ಪಂಚಾಯ್ತಿ ಸಿಬ್ಬಂಧಿಗೂ ಸಹ ಮೂರು ತಿಂಗಳಿಂದ ಸಂಬಳ ಮಾಡಿಲ್ಲ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರನ್ನು ಏಕವಚನದಿಂದ ಮಾತನಾಡುತ್ತಾರೆ, ಕೊರೋನಾ ಸಂದರ್ಭದಲ್ಲಿ ಕಚೇರಿಗೆ ಸರಿಯಾಗಿ ಬರುತ್ತಿಲ್ಲ ಈಗಾಗಿ ಈ ಬಗ್ಗೆ ಕೂಡ್ಲಿಗಿ ಇಓ ಹಾಗೂ ಬಳ್ಳಾರಿ ಸಿಎಸ್ ಗೂ ಸಹ ದೂರು ಸಲ್ಲಿಸಲಾಗಿದ್ದರೂ ಇಲ್ಲಿವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಪಿ.ಎಸ್.ಐ.ಭೇಟಿಃ ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಪ್ರತಿಭಟನೆ ಮಾಡುತ್ತಿದ್ದ ವಿಷಯ ತಿಳಿದ ಗುಡೇಕೋಟೆ ಪಿ.ಎಸ್.ಐ.ಶಂಕರ ಲಮಾಣಿ ಅವರು ಭೇಟಿ ನೀಡಿ ಕೊರೋನಾ ಸಂದರ್ಭದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ ಹಿರಿಯ ಅಧಿಕಾರಿಗಳ ಜೊತೆ ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.
ಪಿಡಿಓ ಪ್ರತಿಕ್ರಿಯೆ


ನಾನು ಕೊರೋನಾ ಸಂದರ್ಭದಲ್ಲಿ ಸರಿಯಾಗಿ ಕೆಲ್ಸ ಮಾಡಿದ್ದೀನಿ, ನನ್ನ ಮಗಳ ಮದುವೆಯ ಪ್ರಯುಕ್ತ ೮ ದಿನಗಳು ರಜೆ ಹಾಕಿರುವೆ ಈಗಾಗಿ ಕಚೇರಿಗೆ 8 ದಿನಗಳಿಂದ ಹೋಗಿಲ್ಲ, ಅಧ್ಯಕ್ಷೆಯ ಗಂಡ ಕಾಮಗಾರಿ ಮಾಡದೇ, ಕ್ರಿಯಾಯೋಜನೆ ಇಲ್ಲದೇ ಬಿಲ್ ಮಾಡಿಕೊಡು ಎಂದು ನನಗೆ ಬೆದರಿಸ್ತಾರೆ, ನನ್ನ ರೂಮಿನಲ್ಲಿ ಕೂಡಿಹಾಕಲು ಬಂದಿದ್ದಾರೆ ಈಗಾದ್ರೆ ನಾನು ಹೇಗೆ ಕೆಲ್ಸ ಮಾಡೋಕೆ ಆಗುತ್ತೆ, ಕೆಲಸ ಮಾಡಿ ಬಿಲ್ ಮಾಡಿಕೊಡ್ತೀನಿ ಎಂದು ಹೇಳಿದರೆ ಮೈಮೇಲೆ ಬೀಳಲು ಬರ್‍ತಾರೆ ಈಗಾಗಿಯೇ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸ್ತಾರೆ, ನಾನು ಯಾರ ಜೊತೆಗೂ ಅಸಭ್ಯವಾಗಿ ವರ್ತಿಸಿಲ್ಲ ಎಂದು ಪ್ರತಿಕ್ರಿಯಿಸುತ್ತಾರೆ ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ದಯಾನಂದ ವಾಗ್ಮೋರೆ.