ಅಪ್ಪು ಸಮಾಧಿ ವೀಕ್ಷಣೆಗೆ ಇನ್ನೂ ಹರಿದು ಬರುತ್ತಿರುವ ಜನಸಾಗರ

ಬೆಂಗಳೂರು, ನ.೧೬- ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಪುನೀತ್ ರಾಜಕುಮಾರ್ ಅವರು ನಿಧನರಾಗಿ ೧೮ ದಿನ ಕಳೆದಿದ್ದರೂ ಅವರ ಸಮಾಧಿ ಸ್ಥಳ ವೀಕ್ಷಣೆಗೆ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ.
ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಸಮಾಧಿ ಸ್ಥಳಕ್ಕೆ ಕಳೆದ ೧೩ ದಿನಗಳಲ್ಲಿ ೨,೨೬ಲಕ್ಷಕ್ಕೂ ಅಧಿಕ ಮಂದಿ ದರ್ಶನ ಪಡೆದಿದ್ದಾರೆ. ಈ ಸಂಖ್ಯೆ ನಿತ್ಯ ಹೆಚ್ಚುತ್ತಿದೆ.
ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗಲಿದ ನಟನ ನೆನೆದು ಕಣ್ಣೀರಿಡುವ ದೃಶ್ಯ ಮನಕಲಕುವಂತಿತ್ತು.
ಬೆಂಗಳೂರಿನಲ್ಲಿ ಕಳೆದ ಒಂದು ವಾರಕ್ಕೂ ಹೆಚ್ಚು ಸಮಯದಿಂದ ಎಡಬಿಡದೆ ಮಳೆ ಸುರಿಯುತ್ತಿದೆ ಮಳೆಯನ್ನು ಲೆಕ್ಕಿಸದೆ ಅಭಿಮಾನಿಗಳು ವಿವಿಧ ಭಾಗಗಳಿಂದ ಸಮಾಧಿ ಸ್ಥಳಕ್ಕೆ ಆಗಮಿಸಿ ಪುನೀತ್ ರಾಜ್ ಕುಮಾರ್ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಅಕ್ಟೋಬರ್ ೨೯ರಂದು ತೀವ್ರ ಹೃದಯಾಘಾತದಿಂದ ಕನ್ನಡ ಚಿತ್ರರಂಗವನ್ನು ಮತ್ತು ಅಭಿಮಾನಿಗಳನ್ನು ಪುನೀತ್ ರಾಜಕುಮಾರ್ ಅಗಲಿದ್ದರು.
ಎರಡು ದಿನಗಳ ಕಾಲ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕುಟುಂಬದ ಸದಸ್ಯರು ಮತ್ತು ಸರ್ಕಾರ ವ್ಯವಸ್ಥೆ ಮಾಡಿದ್ದು ಈ ಸಂದರ್ಭದಲ್ಲಿ ಬರೋಬ್ಬರಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ರಾಜಕುಮಾರ್ ಅಂತಿಮ ದರ್ಶನ ಪಡೆದಿದ್ದರು. ಪುನೀತ್ ರಾಜಕುಮಾರ್ ಅವರು ಆಗಲಿದ್ದಾರೆ ಎನ್ನುವುದನ್ನೂ ಅಭಿಮಾನಿಗಳು ಇಂದಿಗೂ ಕೂಡ ಊಹೆ ಮಾಡಿಕೊಳ್ಳಲು ಆಗುತ್ತಿಲ್ಲ.