ಅಪ್ಪು ವರ್ಸಸ್ ಅಲ್ಲಮ; ಯಾರ ಪಾಲಿಗೆ ಗೆಲುವಿನ ತೋರಣ?

ಮಹೇಶ್ ಕುಲಕರ್ಣಿ

ಕಲಬುರಗಿ:ಏ.21: ರಾಜ್ಯ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಮತದಾನದ ದಿನಗಣನೆಯ ಬೆನ್ನಲ್ಲೇ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಕಾವು ಕ್ಷಣಕ್ಷಣಕ್ಕೂ ರಂಗೇರುತ್ತಿದೆ. ಮುಖ್ಯವಾಗಿ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ದತ್ತಾತ್ರೇಯ ಸಿ.ಪಾಟೀಲ್ (ಅಪ್ಪುಗೌಡ) ರೇವೂರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮೇಲ್ಮನೆಯ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಮಧ್ಯೆ ಪ್ರಬಲ ಕುಸ್ತಿ ಏರ್ಪಟ್ಟಿದೆ.

2018ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ರೇವೂರ್ 64,788 ಮತಗಳನ್ನು ಪಡೆಯುವ ಮೂಲಕ ಶೇ.44.88ರಷ್ಟು ಮತಗಳನ್ನು ಪಡೆದಿದ್ದರು. ಇನ್ನೊಂದೆಡೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಲ್ಲಮಪ್ರಭು ಪಾಟೀಲ್ 59,357 ಮತಗಳೊಂದಿಗೆ ಎರಡನೇ ಸ್ಥಾನಕ್ಕೆ ಖುಷಿಪಟ್ಟರೂ, ಅವರು ಶೇ.41.12ರಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಮಧ್ಯೆ, ಅಂದು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದ ಬಸವರಾಜ ಡಿಗ್ಗಾವಿ 14,359 ಮತಗಳನ್ನು ಪಡೆದು ಶೇ.9.95ರಷ್ಟು ಮತಗಳನ್ನು ತಮ್ಮ ಪರವಾಗಿ ಕ್ರೋಢೀಕರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈ ಬಾರಿಯ ಸ್ಥಿತಿ 2018ರ ಚುನಾವಣೆಗಿಂತಲೂ ಭಿನ್ನವಾಗಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಹಾಲಿ ಶಾಸಕರೂ ಆಗಿರುವ ಅಪ್ಪುಗೌಡ ಕೆಕೆಆರ್‍ಡಿಬಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಕೆಕೆಆರ್‍ಡಿಬಿ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ತಮಗೆ ಮತ್ತೊಂದು ಅವಕಾಶ ನೀಡಬೇಕೆಂದು ಅವರು ಪ್ರಚಾರದ ವೇಳೆ ಮತದಾರರನ್ನು ಕೋರುತ್ತಿದ್ದಾರೆ. ಮತ್ತೊಂದೆಡೆ, ಕಳೆದ 25 ವರ್ಷಗಳಿಂದ ದಕ್ಷಿಣ ಕ್ಷೇತ್ರ ರೇವೂರ್ ಕುಟುಂಬದ ಸುಪರ್ದಿಯಲ್ಲಿದೆ. 2008ರಲ್ಲಿ ದಿ.ಚಂದ್ರಶೇಖರ ಪಾಟೀಲ್ ರೇವೂರ್ ಶಾಸಕರಾಗಿದ್ದರು. 2010ರಲ್ಲಿ ಅವರ ಅಕಾಲಿಕ ನಿಧನದಿಂದಾಗಿ ನಡೆದ ಉಪಚುನಾವಣೆಯಲ್ಲಿ ಅಪ್ಪುಗೌಡರ ತಾಯಿ ಅರುಣಾ ಚಂದ್ರಶೇಖರ ಪಾಟೀಲ್ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಗೊಂಡಿದ್ದರು. 2013 ಮತ್ತು 2018ರಲ್ಲಿ ಅಪ್ಪುಗೌಡ ನಿರಂತರ ಎರಡು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಹೀಗಾಗಿ, ಈ ಬಾರಿ ತಮಗೊಂದು ಅವಕಾಶ ನೀಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಮತದಾರರ ಮನವೊಲಿಸುವ ಯತ್ನ ನಡೆಸಿದ್ದಾರೆ.

2018ರ ಅಸೆಂಬ್ಲಿ ಚುನಾವಣೆಯಲ್ಲಿ 5431 ಮತಗಳು ಗೆಲುವಿನ ಹಣೆಬರಹ ನಿರ್ಧರಿಸಿದ್ದವು ಎಂಬ ಅಂಶವನ್ನು ಪ್ರಧಾನವಾಗಿಟ್ಟುಕೊಂಡು ಈ ಬಾರಿ ಅಪ್ಪುಗೌಡ ಮತ್ತು ಅಲ್ಲಮಪ್ರಭು ಪಾಟೀಲ್ ತಮ್ಮ ಹೋಂವರ್ಕ್ ಹಾಗೂ ಫೀಲ್ಡ್ ವರ್ಕ್ ತೀಕ್ಷ್ಣಗೊಳಿಸಿದ್ದು, ಮೇ 13ರಂದು ಈ ಪರಿಶ್ರಮದ ಫಲಶ್ರುತಿ ಅನಾವರಣಗೊಳ್ಳಲಿದೆ.


ಮುಸ್ಲಿಂ ಮತದಾರರ ಜಾಣ ನಡೆ!

ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಮುಸ್ಲಿಂ ಮತದಾರರಿದ್ದಾರೆ. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಾರೆಡ್ಡಿ ಎಷ್ಟು ಮತಗಳನ್ನು ತಮ್ಮತ್ತ ಸೆಳೆಯುತ್ತಾರೆ ಎಂಬುದು ಕ್ಷೇತ್ರದಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ. ಇನ್ನೊಂದೆಡೆ, ಆಮ್ ಆದ್ಮಿ ಪಕ್ಷದ (ಆಪ್) ಸಿದ್ದು ಪಾಟೀಲ್ ತೆಗನೂರ್ ಪರವಾಗಿಯೂ ಮುಸ್ಲಿಂ ಮತಗಳು ವಾಲುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಆಪ್ ಅಭ್ಯರ್ಥಿಗಳ ಮಧ್ಯೆ ಹಂಚಿ ಹೋಗುವ ಮತಗಳು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಮಧ್ಯದ ನೇರ ಹಣಾಹಣಿಯಲ್ಲಿ ಗಣನೀಯ ಪಾತ್ರ ವಹಿಸಲಿವೆ ಎಂದು ಕ್ಷೇತ್ರದ ಪ್ರಜ್ಞಾವಂತ ಮತದಾರರು ವ್ಯಾಖ್ಯಾನಿಸುತ್ತಿದ್ದಾರೆ.

ಈ ಎಲ್ಲ ವಿದ್ಯಮಾನಗಳ ಮಧ್ಯೆ, ಕೆಕೆಸಿಸಿಐ ಮಾಜಿ ಗೌರವ ಕಾರ್ಯದರ್ಶಿ ಶರಣು ಪಪ್ಪಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದು, ಹಿಂದೂ-ಮುಸ್ಲಿಂ ಸಮುದಾಯದಲ್ಲಿ ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವ ಅವರು ಎಷ್ಟು ಮತಗಳನ್ನು ಸೆಳೆಯಲಿದ್ದಾರೆ ಎಂಬ ಕುತೂಹಲ ಕ್ಷೇತ್ರದ ಮತದಾರರನ್ನು ಕಾಡುತ್ತಿದೆ.


ಮತದಾರರ ಜಾತಿವಾರು ಪ್ರಮಾಣ

2018ರ ಅಸೆಂಬ್ಲಿ ಚುನಾವಣೆಯಲ್ಲಿ ಕ್ಷೇತ್ರದ ಮತದಾರರ ಸಂಖ್ಯೆ 2,63,662. ಈ ಪೈಕಿ ಲಿಂಗಾಯತರು 68 ಸಾವಿರ, ದಲಿತ ಮತದಾರರು 65 ಸಾವಿರ, ಬ್ರಾಹ್ಮಣರು 24 ಸಾವಿರ, ಮುಸ್ಲಿಮರು 38 ಸಾವಿರ, ಕಬ್ಬಲಿಗ ಮತ್ತು ಕುರುಬ ಸಮುದಾಯದ 48 ಸಾವಿರ ಮತದಾರರಿದ್ದರು. ಈ ಸಂಖ್ಯೆಗೆ ಗಾಣಿಗ, ಜೈನ, ಮಾರವಾಡಿ, ವಾಸವಿ, ಹೂಗಾರ ಸಮುದಾಯಗಳನ್ನು ಕ್ರೋಢೀಕರಿಸಿದರೆ 8000-10,000 ಮತದಾರರಿದ್ದರು. ಚುನಾವಣಾ ಆಯೋಗದ ಅಂದಾಜಿನಂತೆ ಐದು ವರ್ಷಗಳಲ್ಲಿ ಸುಮಾರು ಶೇ.8-10ರಷ್ಟು ಮತದಾರರು ಹೆಚ್ಚಾದರೂ ಕ್ಷೇತ್ರದಲ್ಲಿ ಪ್ರಸ್ತುತ ಸುಮಾರು 2.89 ಲಕ್ಷ ಮತದಾರರಿದ್ದಾರೆ.