ಅಪ್ಪು ನೀ ಇರಬಾರದಿತ್ತೇ.. ಕಣ್ಣೀರ ಕಡಲಲ್ಲಿ ತೇಲಿ ಹೋದ ಚಿತ್ರರಂಗ

ಬೆಂಗಳೂರು,ನ.16- “ಕಣ್ಣಂಚಲಿ ತುಂಬಿ ತುಳುಕುತ್ತಿದ್ದ ಕಣ್ಣೀರು, ಹೃದಯ ಬಾರವಾಗಿ ಮಾತು ಮೌನಕ್ಕೆ ಜಾರಿತ್ತು. ಅಪ್ಪು ನೀ ಇರಬಾರದಾಗಿತ್ತೇ ಎನ್ನುವಂತೆ ಭೂಮಿ ಆಕಾಶ ನೋಡುತ್ತಿದ್ದ ಕಂಗಳು…”

ಹುಟ್ಟಿನಿಂದ ಸಾವಿನ ಕೊನೆ ಕ್ಷಣದ ತನಕ ನಡೆದು ಬಂದು ಹಾದಿ, ಹೆಜ್ಜೆಗುರುತು, ಸಿನಿಮಾ ಪಯಣದ ಯಶೋಗಾಥೆ ಪರದೆಯ ಮೇಲ ಬಿತ್ತರಗೊಳ್ಳುತ್ತಿದ್ದಂತೆ ಒಂದೊಂದು ದೃಶ್ಯವನ್ನು ನೋಡಿ ನೆರದಿದ್ದ ಮಂದಿ ಮಮ್ಮಲ‌ ಮರುಗಿದರು.

ಪತ್ನಿ ಅಶ್ವಿನಿ , ಮಗಳು ವಂದನಾ ದೃಶ್ಯಗಳನ್ನು ನೋಡುತ್ತಲೇ ಕಣ್ಣೀರು ಒರೆಸಿಕೊಂಡು ಮತ್ತಷ್ಟು ಭಾವುಕರಾದ ಕ್ಷಣ ನೆರದಿದ್ದ ಮಂದಿಯ ಹೃದಯ ಕಲುಕುವಂತೆ ಮಾಡಿತ್ತು.

ಪಕ್ಕದಲ್ಲಿ ಆಸೀನರಾಗಿದ್ದ ಹಿರಿಯ ಸಹೋದರ ಶಿವರಾಜ್ ಕುಮಾರ್, ಅವರ ಪತ್ನಿ ಗೀತಾ, ಮತ್ತೊಬ್ಬ ಸಹೋದರ ರಾಘವೇಂದ್ರ ರಾಜ್ ಕುಮಾರ್ ಸೇರಿ ರಾಜ್ ಪರಿವಾರ ಕಣ್ಣೀರ ಕಡಲಲ್ಲಿ ತೇಲುವಂತಾಯಿತು.

ಚಿತ್ರರಂಗದ ಹಾಗು ರಾಜಕೀಯ ನಾಯಕರು ಮೊಂಬತ್ತಿ ಹಚ್ಚಿ ಮೌನವಾಗಿ ಶ್ರದ್ದಾಂಜಲಿ ಸಲ್ಲಿಸುತ್ತಿದ್ದಂತೆ ಅರಿವಿಲ್ಲದಂತೆ ಎಲ್ಲರ ಹೃದಯ ಮತ್ತು ಕಣ್ಣುಗಳು ತುಂಬಿ ಬಂದಿದ್ದವು.

ಕಳೆದ ತಿಂಗಳು 29 ರಂದು ಹಠಾತ್ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ” ಪುನೀತ್ ನಮನ” ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.

ರಾಜ್ಯ ಸರ್ಕಾರದ ಸಹಯೋಗದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪ, ಮೈಸೂರು ರಾಜಮನೆತನದ ಯಧುವೀರ ಶ್ರೀಕಂಠದತ್ತ ಒಡೆಯರ್ ಸೇರಿ ರಾಜ್ಯ ಸರ್ಕಾರ್ ಸಚಿವರು, ಕನ್ನಡ ಚಿತ್ರರಂಗದ ಖ್ಯಾತ‌ನಟರಾದ ರವಿಚಂದ್ರನ್, ರಮೇಶ್ ಅರವಿಂದ್ ಸೇರಿ ಹಲವು ಮಂದಿ ನಟ, ನಟಿಯರು ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ‌ನಮನ ಸಲ್ಲಿಸಿ ಭಾವುಕರಾದರು.

ಕ್ಷಮೆಯಾಚನೆ

ಪುನೀತ್ ನಮನ ಕಾರ್ಯಕ್ರಮವನ್ನು ಒಳಾಂಗಣದಲ್ಲಿ ಆಯೋಜಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ಪ್ರವೇಶ ನೀಡಲು ಸಾಧ್ಯವಾಗಿಲ್ಲ.ಹೀಗಾಗಿ ಅಭಿಮಾನಿಗಳು ಹಾಗು ಸಾರ್ವಜನಿಕರ ಕ್ಷಮೆ ಕೋರುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಹೇಳಿದ್ದಾರೆ.

ಶಿವರಾಜ್ ಕುಮಾರ್ ಮತ್ತು ರಾಜ್ ಕುಮಾರ್ ಕುಟುಂಬದ ಜೊತೆ ಚರ್ಚೆ ನಡೆಸಿದ್ದು ಮತ್ತೊಮ್ಮೆ ಪುನೀತ್ ನಮನ ಕಾರ್ಯಕ್ರಮ ಆಯೋಜಿಸಿ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

ಅಭಿಮಾನಿಗಳ ನಿರಾಸೆ

ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪುನೀತ್ ನಮನ ಕಾರ್ಯಕ್ರಮಕ್ಕೆ ಅವಾಕಾಶ ಸಿಗದ ಹಿನ್ನೆಲೆಯಲ್ಲಿ ಸಾಕಷ್ಟು ಅಭಿಮಾನಿಗಳು ನಿರಾಸೆಯಾಗಿ ಹಿಂತಿರುಗಿದರು.

ಪುನೀತ್ ನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಾರಿ ಬಗಿ ಭದ್ರತೆ ಮತ್ತು ಸರ್ಪಗಾವಲು ಹಾಕಲಾಗಿತ್ತು.ಪಾಸ್ ಇದ್ದವರಿಗಷ್ಟೇ ಒಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಲಾಗಿತ್ತು.

ಮಕ್ಕಳ ಶಿಕ್ಷಣ ಜವಬ್ದಾರಿ ನನ್ನದು- ನಟ ವಿಶಾಲ್

ಪುನೀತ್ ರಾಜ್ ಕುಮಾರ್ ಅವರು ನೋಡಿಕೊಳ್ಳುವ ಮಕ್ಕಳ ಶಿಕ್ಷಣದ ಜವಬ್ದಾರಿ ತಾವು ವಹಿಸಿಕೊಳ್ಳುವುದಾಗಿ ತಮಿಳು ನಟ ವಿಶಾಲ್ ಮತ್ತೊಮ್ಮೆ ಎಲ್ಲರದು ಪ್ರಕಟಿಸಿದರು.

ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಬದಲಾಗಿ ರಾಜ್ ಕುಟುಂಬದ ಸದಸ್ಯರಾಗಿ, ಸ್ವಯಂ ಸೇವಕನಾಗಿ ಈ ಕೆಲಸ ಮಾಡುತ್ತಿದ್ದೇನೆ. ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

ಪುನೀತ್ ರಾಜಕುಮಾರ್ ಅಗಲಿಕೆಯ ಸುದ್ದಿ ಕೇಳಿ ಆಘಾತಗೊಂಡಿದೆ ಎರಡು ದಿನ ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ. ಅವರು ಸಹೋದರ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು