ಅಪ್ಪು ಕನಸಿನ ‘ಗಂಧದಗುಡಿ’ ಟೀಸರ್ ರಿಲೀಸ್


ಬೆಂಗಳೂರು,ಡಿ.೬- ಪವರ್ ಸ್ಟಾರ್ ದಿ. ಪುನೀತ್ ರಾಜ್‌ಕುಮಾರ್ ಅವರ ಕನಸು ಇಂದು ನನಸಾಗಿದೆ. ಕನ್ನಡ ನಾಡಿನ ಅರಣ್ಯಸಂಪತ್ತು, ವನ್ಯಜೀವಿ ಸಂಪತ್ತಿನ ಬಗ್ಗೆ ಪುನೀತ್ ಕನಸಿನ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೈಟಲ್‌ನ ಟೀಸರ್ ಇಂದು ಬಿಡುಗಡೆಯಾಗಿದೆ.
ಪಾರ್ವತಮ್ಮ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಪಿಆರ್‌ಕೆ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಇಂದು ಬೆಳಗ್ಗೆ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ.
ಟೀಸರ್ ನಲ್ಲಿ ದಟ್ಟಕಾಡಿನ ನಡುವೆ ಪುನೀತ್ ರಾಜ್‌ಕುಮಾರ್ ಪ್ರಯಾಣಿಸುವುದನ್ನು ಕಾಣಬಹುದಾಗಿದೆ. ಆನೆ, ಹುಲಿ, ಹಾವು ಸೇರಿದಂತೆ ಸುಂದರವಾದ ಪ್ರಕೃತಿ ಸೌಂದರ್ಯದ ದೃಶ್ಯಗಳು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಕೊನೆಯಲ್ಲಿ ಅರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು ಎಂಬ ಸಂದೇಶ ಸಾರಲಾಗಿದೆ.
ಟೀಸರ್ ಜೊತೆಗೆ ಅಪ್ಪು ಅವರ ಕನಸಿದು, ಅದ್ಭುತ ಪಯಣ, ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ, ಮರುಕಳಿಸಿದ ಚರಿತ್ರೆಯಿದು ‘ಗಂಧದ ಗುಡಿ’ ಎಂದು ಕ್ಯಾಪ್ಷನ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬರೆದುಕೊಂಡಿದ್ದಾರೆ. ಮತ್ತೊಂದೆಡೆ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ಸಹ ಟೀಸರ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಮೋಘ ವರ್ಷ ನಿರ್ದೇಶನದ ಈ ಡಾಕ್ಯುಮೆಂಟರಿ ಸಿನಿಮಾ ಮುಂದಿನ ವರ್ಷ ೨೦೨೨ರಲ್ಲಿ ತೆರೆಕಾಣಲಿದೆ. ನಿನ್ನೆಯಷ್ಟೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ‘ಹಿಂದೆಂದೂ ಕಾಣದ ಸಿನಿಮಾ ಅನುಭವ. ನಿಮ್ಮ ಮುಂದೆ’ ಎಂದು ಟ್ವೀಟ್ ಮಾಡಿದ್ದರು. ಈ ಮೂಲಕ ಟೀಸರ್ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದರು.
ನವೆಂಬರ್ ೧ರ ಕನ್ನಡ ರಾಜ್ಯೋತ್ಸವದಂದು ಅಪ್ಪು ಈ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಪುನೀತ್, ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದಷ್ಟೇ ನೇತ್ರಾಣಿಯಲ್ಲಿ ಮಾಡಿದ ಸ್ಕೂಬಾ ಡೈವಿಂಗ್‌ನ ಫೋಟೊವೊಂದರ ಜೊತೆ ಅಶ್ವಿನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಡಾಕ್ಯುಮೆಂಟರಿ ಬಿಡುಗಡೆಯ ಸುಳಿವು ನೀಡಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.
ಶುಭ ಕೋರಿದ ಸಿಎಂ
ಪವರ್ ಸ್ಟಾರ್ ದಿ. ಪುನೀತ್ ರಾಜ್‌ಕುಮಾರ್ ಅವರ ಕನಸಿನ ‘ಗಂಧದಗುಡಿ’ ಡಾಕ್ಯುಮೆಂಟ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದ್ದಾರೆ.
ಗಂಧದಗುಡಿಯ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ ಎಂದು ಟ್ವಿಟರ್ ನಲ್ಲಿ ಮುಖ್ಯಮಂತ್ರಿಗಳು ಬರೆದುಕೊಂಡಿದ್ದಾರೆ.
ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ದಿ. ಪುನೀತ್ ರಾಜಕುಮಾರ್ ಅಭಿನಯದ ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಿಸಿರುವ ‘ಗಂಧದ ಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ