ಅಪ್ಪು ಎಕ್ಸಪ್ರೆಸ್ ಆಂಬುಲೆನ್ಸ್ ಕೊಡುಗೆ

ಮೈಸೂರು,ಆ.6:- ಮೈಸೂರಲ್ಲಿ ನಟ ಪ್ರಕಾಶ್ ರಾಜ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ `ಅಪ್ಪು ಎಕ್ಸಪ್ರೆಸ್’ ಆಂಬುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಸಂದರ್ಭ ನಿರ್ಮಾಪಕ ಸಂತೋಷ್ ರಾಮ್ ಮೈಸೂರಿನ ಸಪ್ಲೈಯರ್ ಗೆ 50 ಸಾವಿರ ನಟ ಪುನೀತ್ ರಾಜ್ ಕುಮಾರ್ ನೀಡಿದ್ದನ್ನು ಸ್ಮರಿಸಿದರು. ಹತ್ತು ವರ್ಷದ ಹಿಂದೆ ಪುನೀತ್ ರಾಜಕುಮಾರ್ 50ಸಾವಿರ ರೂ.ನೀಡಿದ್ದು, ಅದನ್ನು ನೆನೆದು ಮೈಸೂರಿನ ಪಿಶ್ ಲ್ಯಾಂಡ್ ಹೋಟೆಲ್ ಸಿಬ್ಬಂದಿ ಭಾವುಕರಾಗಿದ್ದರು. ಅವರ ತಂದೆಯ ಹೃದಯ ಸಂಬಂಧಿ ಕಾಯಿಲೆ ಚಿಕಿತ್ಸೆಗೆ ಹಣ ನೀಡಿದ್ದರು. ಒಮ್ಮೆ ನಾವು ಅಲ್ಲಿಗೆ ಹೋಗಿದ್ದಾಗ ಸಪ್ಲೈಯರ್ ಭಾವುಕರಾಗಿ ಹೇಳಿದ್ದರು.
ಇದು ಮಾನವೀಯತೆ ಇರುವ ವೇದಿಕೆ. ಪುನೀತ್ ರಾಜಕುಮಾರ್ ವ್ಯಕ್ತಿತ್ವ ದೊಡ್ಡದು. ಟ್ರೋಲ್ ಸಮಾಜದ ನಡುವೆ ವ್ಯಕ್ತಿತ್ವ ಜೀವಿಸಿದ ವ್ಯಕ್ತಿ. ಪುನೀತ್ ಹೆಸರನ್ನು ಶಾಶ್ವತವಾಗಿ ಉಳಿಸುವ ಆಸೆ ನಮ್ಮದು. ಪ್ರಕಾಶ್ ರಾಜ್ ಕಾರ್ಯಕ್ಕೆ ನಾವೂ ಕೂಡ ಕೈ ಜೋಡಿಸುತ್ತೇವೆ ಎಂದು ತಿಳಿಸಿದರು.
ನಟ ಪ್ರಕಾಶ್ ರಾಜ್ ಮಾತನಾಡಿ ರಾಜ್ಯದ 32 ಜಿಲ್ಲೆಗಳಿಗೂ ಆಂಬುಲೆನ್ಸ್ ನೀಡುವ ಕನಸಿದೆ. ಮೊದಲ ಹಂತದಲ್ಲಿ ಮೈಸೂರಿನಲ್ಲಿ ಕೊಡುಗೆ ನೀಡುತ್ತಿದ್ದೇವೆ. ಅಪ್ಪು ಹೆಸರು ಮತ್ತು ಸೇವೆಗಳನ್ನು ಸ್ಮರಿಸುತ್ತಾ ಕೂರಬಾರದು. ಅವರನ್ನು ನಮ್ಮಲ್ಲಿ ಜೀವಂತವಾಗಿ ಉಳಿಸಬೇಕಾದರೆ ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ನಾವು ಮಾಡಬೇಕಿದೆ. ಅಪ್ಪು ಜೊತೆ 3 ಚಿತ್ರಗಳನ್ನು ಮಾಡಿದ್ದರೂ ಉತ್ತಮ ಒಡನಾಟವಿತ್ತು. ಅವರು ಮಾಡುತ್ತಿದ್ದ ಒಳ್ಳೆಯ ಕೆಲಸ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕೊರೋನಾ ಸಂದರ್ಭ ನಾನು ಮಾಡುತ್ತಿದ್ದ ಸೇವಾ ಕಾರ್ಯಗಳಿಗೆ ದೇಣಿಗೆ ನೀಡಿ ಅಪ್ಪು ಸಹಾಯ ಮಾಡಿದ್ದರು. ಅದನ್ನು ಎಲ್ಲಿಯೂ ಹೇಳಿರಲಿಲ್ಲ. ಮಿಷನ್ ಅಸ್ಪತ್ರೆಯಲ್ಲಿ ಅಪ್ಪು ಹೆಸರಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದ್ದು, ಇನ್ನು 2-3 ತಿಂಗಳಲ್ಲಿ ಬ್ಲಡ್ ಬ್ಯಾಂಕ್ ಗೆ ಚಾಲನೆ ಸಿಗಲಿದೆ ಎಂದರು.
ರಾಜ್ಯದ 30 ಜಿಲ್ಲೆಗಳಲ್ಲೂ ಅಪ್ಪು ಎಕ್ಸ್ ಪ್ರೆಸ್ ಗೆ ಚಾಲನೆ ಕೊಡುತ್ತೇನೆ. ಅಪ್ಪು ಹೆಸರಲ್ಲಿ ಸೇವಾ ಕಾರ್ಯ ಮಾಡೋಕೆ ನಾನು ಸಂಕೋಚ ಬಿಟ್ಟು ಸ್ನೇಹಿತರ ಸಹಾಯ ಕೇಳುತ್ತೇನೆ. ನನಗೆ ತುಂಬಾ ಜನ ಸ್ನೇಹಿತರಿದ್ದಾರೆ. ಅವರನ್ನು ಕೇಳಿದರೆ ಖಂಡಿತಾ ಬೆಂಬಲ ಕೊಡುತ್ತಾರೆ. ಎಲ್ಲರೂ ಸೇರಿ ಅಪ್ಪು ಹೆಸರನ್ನು ಉಳಿಸಿಕೊಳ್ಳುವುದರ ಜತೆಗೆ ಅವರ ಸೇವೆ ಮುಂದುವರಿಸಲು ನಾನು ಕಟಿಬದ್ದ. ಆಂಬುಲೆನ್ಸ್ ಕೊಡಲು ಕಾರಣವಿದೆ. ಅಂತಹ ಮಹಾನ್ ನಟನಿಗೆ ಸಕಾಲಕ್ಕೆ ಆಂಬುಲೆನ್ಸ್ ಸಿಕ್ಕಿದ್ದರೆ ಬದುಕುತ್ತಿದ್ದರೇನೋ. ಇಂತಹ ಸ್ಥಿತಿ ಮುಂದೆ ಬಡವರಿಗೆ ಬರಬಾರದೆಂಬ ಉದ್ದೇಶ ನನ್ನದು ಎಂದು ತಿಳಿಸಿದರು.