ಅಪ್ಪನ ಪ್ರೀತಿ-ತ್ಯಾಗ ಸ್ಮರಣೆಗಾಗಿ ಫಾದರ್ಸ್ ಡೇ ಆಚರಣೆ: ಶಿವಾಜಿ ಗಾಯಕವಾಡ

ವಿಜಯಪುರ:ಜೂ.20: ಅಪ್ಪನ ಪ್ರೀತಿ, ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 18ರಂದು ಫಾದರ್ಸ್ ಡೇ ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ಪಾದರ್ಸ್ ಡೇ ಅನ್ನು ಆಚರಿಸಲಾಗುತ್ತದೆ ಎಂದು ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಶಿವಾಜಿ ಗಾಯಕವಾಡ ತಿಳಿಸಿದರು. ರವೀಂದ್ರನಾಥ ಠಾಗೋರ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಫಾದರ್ಸ್ ಡೇ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಗಲಿರುಳು ದುಡಿದು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿದವರು ತಂದೆ. ನಿಮಗಾಗಿ ತಮ್ಮ ಆಸೆಗಳನ್ನು ಮೂಟೆಕಟ್ಟಿ ಮೇಲಿಟ್ಟವರು ತಂದೆ. ತಂದೆ, ಮಕ್ಕಳ ಮುಂದೆ ಕಠಿಣವಾಗಿ ವರ್ತಿಸುವುದು ನಿವಾರ್ಯವಿರುತ್ತದೆ. ಇದೇ ಕಾರಣಕ್ಕೆ ತಂದೆ ಹಾಗೂ ಮಕ್ಕಳ ಮಧ್ಯೆ ಎಷ್ಟೇ ಪ್ರೀತಿಯಿದ್ದರೂ ಒಬ್ಬರನ್ನೊಬ್ಬರು ವ್ಯಕ್ತಪಡಿಸೋದು ಅಪರೂಪ ಎಂದರು. ಇನ್ನೂ ಶಾಲೆಯ ಪ್ರಿನ್ಸಿಪಲ್ ಫರೀನ್ ಖಾನ್ ಮಾತನಾಡಿ ತಂದೆಗೆ ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವ, ಅವರ ಅಗತ್ಯತೆಗಳನ್ನು ಪೂರೈಸುವ ತಂದೆ, ತನ್ನೆಲ್ಲ ಕಷ್ಟ ಮರೆತು, ಮಕ್ಕಳು, ಕುಟುಂಬಕ್ಕಾಗಿ ದುಡಿಯುತ್ತಾನೆ. ಅದೆಷ್ಟೋ ನೋವನ್ನು ತನ್ನ ಮನಸ್ಸಿನಲ್ಲಿ ಬಚ್ಚಿಟ್ಟು, ಎಲ್ಲರ ಮುಂದೆ ಧೈರ್ಯವಂತ, ಶಕ್ತಿವಂತ, ಆರೋಗ್ಯವಂತ ಎಂದು ನಟನೆ ಮಾಡ್ತಾ ಜೀವನ ಸವೆಸುವವನು ತಂದೆ. ತಾಯಿಯ ಮಹತ್ವ ಹೇಳಲು, ಆಕೆಗೆ ಧನ್ಯವಾದ ಹೇಳಲು ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತದೆ. ಅದೇ ರೀತಿ ವಿಶ್ವ ತಂದೆಯಂದಿರ ದಿನವನ್ನು ಕೂಡ ಆಚರಣೆ ಮಾಡ್ತಾ ಬರಲಾಗಿದೆ ಎಂದು ಫಾದರ್ಸ್ ಡೇ ಇತಿಹಾಸ ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ ಕುರಿತು ಮಾತನಾಡಿದರು. ಇನ್ನೂ ಕೆಲ ವಿದ್ಯಾರ್ಥಿಗಳು ತಂದೆಯ ಹೆಸರಿನಲ್ಲಿ ಗ್ರಿಟಿಂಗ್ ತಯಾರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ತಂದೆಯ ಕುರಿತು ಹಾಡುಗಳಿಗೆ ಸಖತ್ ಸ್ಟೆಪ್ ಹಾಕಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಸಂತ ಗಾಯಕವಾಡ ಸೇರಿದಂತೆ ಶಿಕ್ಷಕರು ಹಾಗೂ ಶಿಕಕ್ಷೇತರ ಸಿಬ್ಬಂದಿ ಉಪಸ್ಥಿತರಿದ್ದರು.