ಅಪ್ಪನ ಕೆರೆ ಅಪಾಯಕ್ಕೆ ದೂಡಿದಅವೈಜ್ಞಾನಿಕ ಕಾಮಗಾರಿ:ಅಲ್ಲಮಪ್ರಭು ಪಾಟೀಲ

ಕಲಬುರಗಿ,ಜು 22: ಕೆರೆ ಸೌಂದರ್ಯೀಕರಣ ಹೆಸರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎಸ್‍ಎಫ್‍ಸಿ ಅನುದಾನದಲ್ಲಿ 10 ಕೋಟಿರೂ ವೆಚ್ಚದಲ್ಲಿ ಇಲ್ಲಿನ ಶರಣಬಸವೇಶ್ವರ ಕೆರೆ ಕಾಮಗಾರಿ ಕೈಗೆತ್ತಿಕೊಂಡಿರುವದು ಇಡೀ ಕೆರೆಯನ್ನೇ ಅಪಾಯಕ್ಕೆ ತಳ್ಳಿದೆ, ತಕ್ಷಣ ಈ ಅವೈಜ್ಞಾನಿಕ ಕಾಮಗಾರಿ ನಿಲ್ಲಬೇಕು, ಕೆರೆ ಸಂರಕ್ಷಣೆಯಾಗಬೇಕು, ಅಲ್ಲಿನ ಜಲಮೂಲದ ಸಂರಕ್ಷಣೆಯಾಗಲಿ, ಜಲಚರಗಳಿಗೆ ಅಪಾಯವಾಗದಂತೆ ಕ್ರಮಗಳು ಕೈಗೊಳ್ಳಬೇಕು ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಸದನದಲ್ಲಿ ಸರ್ಕಾದ ಗಮನ ಸೆಳೆದರು.
ಗಮನಸೆಳೆಯುವ ಗೊತ್ತುವಳಿ ಮಂಡಿಸಿ ಈ ವಿಷಯವನ್ನು ಸದನದಲ್ಲಿ ಗಂಭೀರವಾಗಿ ಪ್ರಸ್ತಾಪಿಸಿದ ಅಲ್ಲಮಪ್ರಭು ಪಾಟೀಲರು ಕೆರೆಯ ಬದುವಿನ ಮೇಲೆಯೇ ಕಾಮಗಾರಿ ಮಾಡಲಾಗುತ್ತಿದೆ. ಕಾಂಕ್ರೀಟ್ ರಚನೆ ಬದುವಿನ ಮೇಲೆ ಬಂದಲ್ಲಿ ಕೆರೆಯ ಬದುವು ಅಶಕ್ತವಾಗಿ ಒಡೆಯುವ ಅಪಾಯಗಳಿವೆ. ಇದಲ್ಲದೆ ಕೆರೆಯ ನೀರು ಸಂಗ್ರಹಕ್ಕೂ ಈ ಕಾಮಗಾರಿ ಅಪಾಯ ತಂದೊಡ್ಡಿದೆ ಎಂದರು.

ಕಲಬುರಗಿ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ) ಅತ್ಯಂತ ಪುರಾತನ ಕೆರೆಯಾಗಿದೆ, ಈ ಕೆರೆಯಿಂದಲೇ ಕಲಬುರಗ ಮಹಾನಗರದ ಅಂತರ್ಜಲ ರಕ್ಷಣೆ ಯಾಗುತ್ತಿದೆ. ಯಾವುದೇ ಜಲಮೂಲಗಳಲ್ಲಿ ನೀರು ನಿಲ್ಲುವ ಪ್ರದೇಶಕ್ಕೆ ತೊಂದರೆಯಾಗದಂತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಆದರೆ ದರೆ ಅಪ್ಪನ ಕರೆಯಲ್ಲಿ ಸಿಮೆಂಟ್ ಕಟ್ಟೆಗಳು ಕೆರೆಯ 20 ಅಡಿ ಜಾಗವನ್ನೇ ಅತಿಕ್ರಮಿಸಿವೆ. ಹೀಗಾಗಿ ಕೆರೆಯ ನೀರಿನ ಸಂಗ್ರಹಕ್ಕೂ ಕೊಕ್ಕೆ ಬಿದ್ದಿದೆ.ಒಟ್ಟಾರೆಯಾಗಿ ಸಾವಿರಾರು ಕೊಳವೆ ಬಾವಿಗಳು, ತೆರೆದ ಬಾವಿಗಳಿಗೆ ಕಲಬುರಗಿ ನಗರದಲ್ಲಿರುವ ಏಕೈಕ ಜಲಮೂಲ ಹಾಳುಗೆಡವುವ ಕೆಲಸವಾಗಿದೆ ಎಂದು ಆತಂಕ ಹೊರಹಾಕಿದರು.
ಈ ಕೆರೆಯ ಕಾಮಗಾರಿಯಲ್ಲಿ ಕಾಯ್ದೆ, ಕಾನೂನು ಉಲ್ಲಂಘನೆಯಾಗಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಸಹ ಪಡೆದಿಲ್ಲ. ಸಿಮೆಂಟ್ ಕಟ್ಟಡ ಯಾವುದೇ ಕಾರಣಕ್ಕೂ ಕೆರೆಯ ಜಾಗ ಕಬಳಿಸಬಾರದು ಎಂಬ ಷರತ್ತಿದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ಅನೇಕ ಕಾನೂನು ಕಮಗಳನ್ನು ಪ್ರಸ್ತಾಪಿಸಿ ಹಿಂದಿನ ಜಿಲ್ಲಾಧಿಕಾರಿಗಳು ಕೆರೆ ಕಾಮಗಾರಿ ನಿಲಿಸಿದ್ದಾರೆ.
ಮೊದಲೇ ಕಲಬುರಗಿಯಲ್ಲಿ ನಿಜಾಂ ಕಾಲದಲ್ಲಿದ್ದ 7 ಕೆರೆಗಳು ಕಬಳಿಕೆಯಾಗಿ ಅವುಗಳ ಪೈಕಿ ಅಪ್ಪನ ಕೆರೆಯೊಂದೇ ಉಳಿದಿರುವಾಗ ಇದನ್ನೂ ನಾವು ಉಳಸಿಕೊಳ್ಳದೆ ಹಾಳು ಮಾಡುತ್ತಿರೋದ ಸರ್ವಥಾ ಸರಿಯಲ್ಲ. ಹಿಂದಿನ ಬಿಜೆಪಿ ಸರ್ಕಾರ, ಸ್ಥಳೀಯ ಅಂದಿನ ಶಾಸಕರ ನೇತೃತ್ವದಲ್ಲಿ ಕೈಗೊಂಡ ಅವೈಜ್ಞಾನಿಕ ಕಾಮಗಾರಿ ಕೆರೆಯನ್ನೇ ಸಂಪೂರ್ಣ ಹಾಳು ಗೆಡವಲು ಹೊರಟಿದೆ. ಇದನ್ನು ತಡೆಯಲೇಬೇಕಾಗಿದೆ ಎಂದು ಆಗ್ರಹಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಸಣ್ಣ ನೀರಾವರಿ ಇಲಾಖೆಯ ತಾಂತ್ರಿಕ ಸಮಿತಿ ಷರತ್ತುಗಳಂತೆಯೇ ಕಾಮಗಾರಿ ಕೈಗೆತ್ತಕೊಳ್ಳಲಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಅದಾಗಲೇ 11 ಕಟ್ಟೆ ನಿರ್ಮಿಸಲಾಗಿದೆ. ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿನ ಪಾಲಿಕೆ ಅಧಕಾರಿಗಳ ಸಭೆಯಲ್ಲಿ ಕೆರೆಯಲ್ಲಿನ ಸದರಿ ಕಾಮಗಾರಿ ಸುತ್ತಮುತ್ತ ಪರಿಸರ ಅಧ್ಯಯನ ನಡೆಸುವಂತೆ ತೀರ್ಮಾನವಾಗಿದ್ದರಿಂದ ಕಾಮಗಾರಿ ನಿಲ್ಲಿಸಲಾಗಿದೆ. ಪರಿಸರ ಅಧ್ಯಯನ ನಡೆಸಿ ವರದಿ ತರಿಸಲಾಗುತ್ತದೆ. ಅದನ್ನಾಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಸದನದಲ್ಲಿ ಭರವಸೆ ನೀಡಿದ್ದಾರೆ.