
ಕಲಬುರಗಿ,ಫೆ.24: ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಉತ್ಸವದ ಕ್ರೀಡಾ ಸಮಿತಿಯು ಸ್ಥಳೀಯ ನೋಪಾಸನಾ ಸಂಸ್ಥೆಯೊಂದಿಗೆ ಇಂದಿನಿಂದ ಮೂರು ದಿನಗಳ ಕಾಲ ನಗರದ ಶರಣಬಸವೇಶ್ವರ ಕೆರೆಯಲ್ಲಿ ಆಯೋಜಿಸಿದ ಜಲ ಕ್ರೀಡೆಯನ್ನು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ಸವದ ಅಂಗವಾಗಿ ಜಲ ಕ್ರೀಡೆ ಆಯೋಜಿಸಿದ್ದು, ನಗರದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮೂರು ದಿನಗಳ ಈ ಜಲ ಕ್ರೀಡೆಯಲ್ಲಿ ಮೋಟಾರ್ ಬೋಟ್ ಒಂದು ಸುತ್ತಿಗೆ 25 ರೂ., ಸ್ವಯಂ ಹುಟ್ಟು ಹಾಕುವ ಬೋಟ್ 25 ರೂ. ರಿಯಾಯಿತಿ ದರ ನಿಗದಿಪಡಿಸಿದೆ. ಬೆಳಿಗ್ಗೆ 10 ರಿಂದ 6 ಗಂಟೆ ವರೆಗೆ ಜಲ ಕ್ರೀಡೆಗೆ ಸಮಯ ನಿಗದಿಪಡಿಸಲಾಗಿದೆ ಎಂದು ನೋಪಾಸನಾ ಸಂಸ್ಥೆಯ ನಿರ್ದೇಶಕ ಶಕೀಬ್ ಮಾಹಿತಿ ನೀಡಿದರು.
ಫೆ.26ಕ್ಕೆ ಕಾಯಾಕಿಂಗ್ ಸ್ಪರ್ಧೆ; ಫೆಬ್ರವರಿ 26ಕ್ಕೆ ಬೆಂಗಳೂರಿನ ಜೇತನಾ ಸಂಸ್ಥೆಯೊಂದಿಗೆ ಕಾಯಾಕಿಂಗ್ ಸ್ಪರ್ಧೆ ಆಯೋಜಿಸಿದ್ದು, ಮುಕ್ತವಾಗಿ ಭಾಗವಹಿಸಲು ಸರ್ವರಿಗೂ ಅವಕಾಶ ಕಲ್ಪಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ, ಪಾಲಿಕೆ ಉಪ ಆಯುಕ್ತ ಪ್ರಕಾಶ ರಜಪುತ್, ಕಾರ್ಯನಿರ್ವಾಹಕ ಅಭಿಯಂತ ಶಿವಣ್ಣಗೌಡ ಪಾಟೀಲ, ಸಿಬ್ಬಂದಿಗಳು ಭಾಗವಹಿಸಿದ್ದರು.