ಅಪ್ನಾ ಭಾರತ್‌ ಮೋರ್ಚಾದಿಂದ ರಾಜಕೀಯ ಸ್ಪರ್ಧೆ

ದಾವಣಗೆರೆ.ನ.೯; ಸಂವಿಧಾನದ ಎಲ್ಲ ಆಶಯಗಳನ್ನು ಇಟ್ಟುಕೊಂಡು, ಅದಕ್ಕೆ ಗುರುತಿಸುವಿಕೆ, ಬಹುತ್ವ ಮತ್ತು ಗೌರವ ಎಂಬ ಮೂರಂಶಗಳನ್ನು ಸೇರಿಸಿಕೊಂಡು ರಾಜಕೀಯ ವೇದಿಕೆ ರಚಿಸಿಕೊಂಡು ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗುತ್ತೇವೆ’ ಎಂದು ಅಪ್ನಾ ಭಾರತ್‌ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಅಶೋಕ್‌ ತನ್ವರ್‌, ರಾಜ್ಯ ಸಂಚಾಲಕ ಪ್ರಕಾಶ್‌ ಕಮ್ಮರಡಿ ಹೇಳಿದರು.ಚಳವಳಿ, ಹೋರಾಟಗಳಷ್ಟೇ ಗುರಿ ಸಾಧಿಸಲು ಸಾಕಾಗುವುದಿಲ್ಲ. ಇವುಗಳ ಜತೆಗೆ ರೈತರ, ಜನಸಾಮಾನ್ಯರ, ಹೋರಾಟಗಾರರ ಆಶಯಗಳನ್ನು ಜಾರಿ ಮಾಡುವ ಸರ್ಕಾರವೂ ಇರಬೇಕು. ಅದಕ್ಕೆ ಚುನಾವಣಾ ರಾಜಕೀಯ ಅಗತ್ಯ ಎಂದು ಅವರು  ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.ಈಗ ಆಡಳಿತ ನಡೆಸುತ್ತಿರುವ ಸರ್ಕಾರಗಳ ಬಗ್ಗೆ ಜನರಿಗೆ ಇರುವ ನೋವು, ಆಕ್ರೋಶಗಳು ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಗೊಳ್ಳಬೇಕು. ಸಮಾಜವಾದಿ ಅಧ್ಯಯನ ಕೇಂದ್ರ, ಅಪ್ನಾ ಭಾರತ್ ಮೋರ್ಚಾ ಮತ್ತು ಪ್ರಗತಿಪರ ಒಕ್ಕೂಟಗಳು ಈ ನಿಟ್ಟಿನಲ್ಲಿ ಕೆಲಸ ಮಾಡಲಿವೆ ಎಂದು ತಿಳಿಸಿದರು.ಹೋರಾಟಗಾರರೂ ಸೇರಿದಂತೆ ಯಾರೂ ಚುನಾವಣಾ ರಾಜಕೀಯದಿಂದ ವಿಮುಖರಾಗಬಾರದು. ಚುನಾವಣೆಯ ಮೂಲಕವೇ ಜನವಿರೋಧಿಗಳಿಗೆ ಪಾಠ ಕಲಿಸಬೇಕು. ನಮ್ಮ ಬೆಂಬಲಿಗ ಸಂಘಟನೆಗಳ ಯಾವುದೇ ಸದಸ್ಯರು ಚುನಾವಣಾ ಕಣಕ್ಕೆ ಇಳಿದರೆ ನಾವು ಬೆಂಬಲಿಸುತ್ತೇವೆ’ ಎಂದರು.ಈಗಿರುವ ಪಕ್ಷಗಳು ಆಮಿಷ, ಜಾತಿ ರಾಜಕಾರಣವನ್ನೇ ಮಾಡಿಕೊಂಡು ಬಂದಿವೆ. ಅದಕ್ಕಿಂತ ಭಿನ್ನವಾಗಿ ರಾಜಕೀಯವಾಗಿ ಯೋಚಿಸುವ ಕ್ರಿಯೆಯನ್ನು ಅಪ್ನಾ ಭಾರತ್‌ ಮೋರ್ಚಾ ಮಾಡಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಹೋರಾಟಗಾರ ತೇಜಸ್ವಿ ವಿ.ಪಟೇಲ್, ನವದೆಹಲಿಯ ಜಾಮೀಯಾ ಮಿಲಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಿ.ಕೆ.ಗಿರಿ, ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ, ಪ್ರಗತಿಪರ ಹೋರಾಟಗಾರ ಅನೀಸ್ ಪಾಷ, ಅಂಜನಪ್ಪ ಅವರೂ ಇದ್ದರು.