ಅಪೌಷ್ಠಿಕ ಮಕ್ಕಳ ಆರೈಕೆಗೆ ಬಾಲಚೈತನ್ಯ ಕೇಂದ್ರ ಸ್ಥಾಪನೆ -ಎನ್ ವೈ ಜಿ.

ಕೂಡ್ಲಿಗಿ.ಜೂ.9: – ಅಪೌಷ್ಟಿಕ ಮಕ್ಕಳಿಗೆ ಒಂದೇ ಸೂರಿನಡಿ ಉತ್ತಮ ಆಹಾರ ಹಾಗೂ ಆರೋಗ್ಯ ಸಿಗಲೆಂಬ ಆಶಯದೊಂದಿಗೆ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.
ಪಟ್ಟಣದ 2ನೇ ವಾರ್ಡ್ ನಲ್ಲಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡುತ್ತಾ ತಾಲೂಕಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 35 ಮಕ್ಕಳಿಗೆ 14 ದಿನಗಳ ಕಾಲ ಈ ಕೇಂದ್ರದಲ್ಲಿ ಪೌಷ್ಟಿಕ ಆಹಾರ, ಚಿಕಿತ್ಸೆ ನೀಡುವುದರ ಮೂಲಕ ಆರೈಕೆ ಮಾಡಲಾಗುವುದು. ಅಲ್ಲದೆ, ಕೇಂದ್ರದಲ್ಲಿರುವ ಪ್ರತಿ ಮಗುವಿನ ಕಡೆಯವರಿಗೆ ಒಬ್ಬರು ಪೋಷಕರು ಇಲ್ಲಿರಲು ಅವಕಾಶವಿದೆ. ಮಕ್ಕಳ ಈ ಆರೈಕೆ ಕೇಂದ್ರದಲ್ಲಿ ಪೂರಕ ಪೌಷ್ಟಿಕಾಂಶಯುಕ್ತ ಆಹಾರದ ವ್ಯವಸ್ಥೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವಹಿಸಿಕೊಂಡರೆ, ಮಗುವಿನ ಆರೋಗ್ಯ ಕಾಪಾಡಲು ಆರೋಗ್ಯ ಇಲಾಖೆಯ ವೈದ್ಯರು ಇರಲಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಲು ಸರ್ಕಾರ ಪೌಷ್ಟಿಕಾಂಶದ ಆಹಾರವನ್ನು ಅಂಗನವಾಡಿಗಳ ಮೂಲಕ ನೀಡುತ್ತಿದೆ. ಆ ಪೌಷ್ಠಿಕಾಂಶದ ಆಹಾರ ವಿತರಣೆಗೆ ಅಧಿಕಾರಿಗಳು ಗಮನಹರಿಸಬೇಕು ಮತ್ತು ಆರೋಗ್ಯ ಸಿಬ್ಬಂದಿಯೂ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ತಿಳಿಸಿದರು.
ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ಜಿ.ಎಂ.ಬಸಣ್ಣ, ತಾಲೂಕು ಆರೋಗ್ಯಾಧಿಕಾರಿ ಷಣ್ಮುಖನಾಯ್ಕ, ಸಿಡಿಪಿಒ ಎನ್.ಪಿ.ನಾಗನಗೌಡ ಪಾಟೀಲ್, ಪಂಚಾಯತ್ ರಾಜ್ ಇಲಾಖೆ ಎಇಇ ಮಲ್ಲಿಕಾರ್ಜುನ, ಬಿಸಿಎಂ ಇಲಾಖೆ ತಾಲೂಕು ವಿಸ್ತರಣಾಧಿಕಾರಿ ಪಂಪಾಪತಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಕ್ರುದ್ದೀನ್, ಪಿಡಬ್ಲ್ಯುಡಿ ಜೆಇ ನಾಗನಗೌಡ, ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಬಿಜೆಪಿ ಕೂಡ್ಲಿಗಿ ಮಂಡಲ ಅಧ್ಯಕ್ಷ ಚೆನ್ನಪ್ಪ, ಮುಖಂಡರಾದ ಕೆ.ಎಚ್ .ವೀರನಗೌಡ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಸೂರ್ಯ ಪಾಪಣ್ಣ, ಭೀಮೇಶ್, ದುರುಗೇಶ್, ಸುನೀಲ್ ಗೌಡ, ತಾಪಂ ಸದಸ್ಯ ಹುಡೇಂ ಪಾಪನಾಯಕ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಚಿನ್ ಕುಮಾರ್, ಚಂದ್ರು ಸೇರಿದಂತೆ ಇತರರಿದ್ದರು.