ಅಪೌಷ್ಠಿಕತೆ ತಡೆಯುವುದಕ್ಕಾಗಿ ರಾಷ್ಟ್ರೀಯ ಪೋಷಣಾ ಅಭಿಯಾನ

ಸಂಡೂರು :ಮಾ:23: ದೇಶದ ಗರ್ಭಿಣಿ ಮತ್ತು ಬಾಣಂತಿ ಹಾಗೂ ಮಕ್ಕಳ ಅಪೌಷ್ಠಿಕತೆ ಹಾಗೂ ರಕ್ತಹೀನತೆಯನ್ನು ತಡೆಯುವುದಕ್ಕಾಗಿ ರಾಷ್ಟ್ರೀಯ ಪೋಷಣಾ ಅಭಿಯಾನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಬಿವೃದ್ದಿಯೋಜನಾಧಿಕಾರಿ ಪ್ರೇಮಮೂರ್ತಿ ತಿಳಿಸಿದರು.
ಅವರು ತಾಲೂಕಿನ ತಾರಾನಗರ ಗ್ರಾಮದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಯೋಜನೆ ಅಡಿಯಲ್ಲಿ ಪೋಷಣಾ ಪಕ್ವಾಡಿ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ, ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸೈಕಲ್ ಜಾಥ ಮಾಡುವ ಮೂಲಕ ಜಾಗೃತಿಗೆ ಚಾಲನೆ ನೀಡಿ ಮಾತನಾಡಿ ತಾಲೂಕಿನಾದ್ಯಂತ ಈ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗಿದೆ, ಅಲ್ಲದೆ ಸರ್ಕಾರ ದೇಶದಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಿಸಬೇಕು ಎನ್ನುವ ಮಹತ್ತರ ಗುರಿಯನ್ನು ಹೊಂದಿದ್ದು ಮಗು ಗರ್ಭದಲ್ಲಿರುವಾಗಲೇ ಅದರ ರಕ್ಷಣೆಮಾಡಲು ಪೋಷಣೆಯನ್ನು ಮಾಡುವ, ನಂತರ ಅದರ ಆರೋಗ್ಯವಂತ ಬೆಳವಣಿಗೆಗೆ ಸಹಕಾರಿಯಾಗುವ ಎಲ್ಲಾ ಅಂಶಗಳನ್ನು ಒದಗಿಸಲಾಗುತ್ತದೆ, ಸಾರ್ವಜನಿಕರು ಅದರ ಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವೈದ್ಯರಾದ ಡಾ. ಹರೀಶ್ ಮಾತನಾಡಿ ಮಕ್ಕಳಲ್ಲಿ ಮತ್ತು ಗರ್ಭಿಣಿ ತಾಯಂದಿರಲ್ಲಿ ರಕ್ತಹೀನಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿಕ್ಕಾಗ ನಮ್ಮ ಇಲಾಖೆಯು ತುಂಬಾ ಶ್ರಮವಹಿಸುತ್ತಿದ್ದು ಅದನ್ನು ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು, ಅಲ್ಲದೆ ಸಮಯಕ್ಕೆ ಸರಿಯಾಗಿ ಅಸ್ಪತ್ರೆಗೆ ಭೇಟಿನೀಡುವ ಮೂಲಕ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಅತಿ ಅಗತ್ಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ತಾಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರ ಇಂದು ಮಹಿಳೆಯರಿಗಾಗಿ ಹತ್ತು ಹಲವು ಯೋಜನೆ ಜಾರಿಗೆ ತಂದಿದೆ, ಅದರಲ್ಲಿ ಭಾಗ್ಯಲಕ್ಷ್ಮೀ ಯೋಜನೆ, ಮಾತೃಭಾಗ್ಯ ಯೋಜನೆ, ಶಿಶುಗಳ ರಕ್ಷಣೆಗೆ ಯೋಜನೆ ಇದ್ದು ಅವು ಸರಿಯಾದ ಸಮಯಕ್ಕೆ ಸಾರ್ವಜನಿಕರಿಗೆ ತಲುಪುವುದು ಬಹುಮುಖ್ಯವಾಗಿದೆ, ಇಂದು ಇಲಾಖೆಯವರು ಜಾಗೃತಿಯ ಜೊತೆಗೆ ಪೌಷ್ಠಿಕ ಆಹಾರವನ್ನು ಸಹ ಪ್ರದರ್ಶನ ಮಾಡುತ್ತಿರುವುದು ಬಹು ಉತ್ತಮಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗಂಗಾಧ ಅವರು ಮಾತನಾಡಿ ಪ್ರತಿಯೊಬ್ಬ ತಾಯಿ ದೇಶಕ್ಕೆ ಉತ್ತಮ ಪ್ರಜೆಯನ್ನು ಕೊಡುತ್ತೇನೆ ಎನ್ನುವ ಭಾವನೆಯನ್ನು ಹೊಂದುವ ಮೂಲಕ ಪೌಷ್ಠಿಕ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯ ರಕ್ಷಿಸಿಕೊಳ್ಳಿ ಎಂದರು.
ಸಮಾರಂಭದಲ್ಲಿ ಮೇಲ್ವಿಚಾರಕಿ ಭಜಂತ್ರ, ಲಿಂಗರಾಜ.ಎಂ. ಪೋಷಣಾ ಅಭಿಯಾನ ಸಹಾಯಕ ಸಂಯೋಜನಕರು, ಹಿರಿಯ ಆರೋಗ್ಯ ಮೇಲ್ವಿಚಾರಕಿ ರೀಟಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಈರಮ್ಮ, ದೈಹಿಕ ಶಿಕ್ಷಕ ರವೀಂದ್ರನಾಥ ಮಾತನಾಡಿದರು, ಗ್ರಾಮಪಂಚಾಯಿತಿ ಸದಸ್ಯರಾದ ಪಾರ್ವತಮ್ಮ, ಸಕ್ಕೂಬಾಯಿ, ಅಂಗನವಾಡಿ ಕಾರ್ಯಕರ್ತೆಯರು, ಅಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.