ಅಪೌಷ್ಠಿಕತೆಯ ಮಕ್ಕಳ ಬಗ್ಗೆ ತಾಯಿಯಂದಿರು ಜಾಗೃತರಾಗಿ

ಹಗರಿಬೊಮ್ಮನಹಳ್ಳಿ:ನ.19 ತಾಯಿ ಮತ್ತು ಶಿಶುಮರಣ ತಡೆಗಟ್ಟುವ ನಿಟ್ಟಿನಲ್ಲಿ ಮನೆ ಹೆರಿಗೆಗೆ ನಿಯಂತ್ರಣ ಹಾಕುವ ಮೂಲಕ ಸಾಂಸ್ಥಿಕ ಹೆರಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಯಮುನಾ ಉಪ್ಪಾರ್ ಹೇಳಿದರು.
ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಐಇಸಿಎಸ್‍ಬಿಸಿಸಿ ಯೋಜನೆಯಡಿಯಲ್ಲಿ ಬಿ.ಜಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಯೋಜಿಸಿದ್ದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಅಪೌಷ್ಠಿಕತೆಯ ಮಕ್ಕಳ ಬಗ್ಗೆ ತಾಯಿಯಂದಿರು ಜಾಗೃತರಾಗಿ ಆರೋಗ್ಯವಂತ ಶಿಶುಗಳನ್ನು ಸಾಮಜಕ್ಕೆ ನೀಡುವ ಮೂಲಕ ಅವರನ್ನು ಸಮಾಜಮುಖಿಗಳನ್ನಾಗಿ ಬೆಳೆಸಬಹುದಾಗಿದೆ. ಗರ್ಭಿಣಿ ಸ್ತ್ರೀಯರು ಪೌಷ್ಠಿಕ ಆಹಾರವನ್ನು ಸೇವಿಸುತ್ತಾ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಬೇಕು. ಯಾವುದೇ ಕಾರಣಕ್ಕೂ ಮನೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಬಾರದು. ಸಾಂಸ್ಥಿಕ ಹೆರಿಗೆಯಿಂದಾಗಿ ತಾಯಿ ಮತ್ತು ಶಿಶುಮರಣವನ್ನು ತಡೆಗಟ್ಟಬಹುದಾಗಿದೆ ಎಂದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬ್ಯಾಟಿ ನಾಗರಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಇಲಾಖೆಯು ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುವುದರ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದ ತಾಯಿಯಂದಿರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಇದೇ ವೇಳೆ ಆರೋಗ್ಯವಂತ ಶಿಶುಗಳಿಗೆ ಬಹುಮಾನ ನೀಡಲಾಯಿತು. 6ತಿಂಗಳಿನ ದೀಕ್ಷಾ ಪ್ರಥಮ, 10ತಿಂಗಳಿನ ದಿವ್ಯ ದ್ವಿತೀಯ, 1.5ತಿಂಗಳಿನ ಶಿವಮೂರ್ತಿ ತೃತೀಯ ಬಹುಮಾನ ಪಡೆದ ಮಕ್ಕಳಾಗಿದ್ದಾರೆ.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಎನ್.ಲಕ್ಷ್ಮಿ, ಎಮ್.ಭಾಷಾ, ಆಶಾ, ಮಂಜುಳ, ಗೀತಾ, ಸುಜಾತ, ಗ್ರಾಮದ ಮುಖಂಡ ಜೆ.ಎಂ.ರುದ್ರಮುನಿ ಸ್ವಾಮಿ, ಸ್ವ ಸಹಾಯ ಸಂಘದ ಸದಸ್ಯರಾದ ನೀಲಮ್ಮ, ಪ್ರೇಮಕ್ಕ ಸೇರಿದಂತೆ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.