ಅಪೌಷ್ಠಿಕತೆಯಿಂದ ಕಲ್ಯಾಣ ಕರ್ನಾಟಕದಲ್ಲಿ ಶಿಶುಗಳ, ತಾಯಂದಿರ ಮರಣ ಪ್ರಮಾಣದಲ್ಲಿ ಹೆಚ್ಚಳ: ತಳವಾರ್ ಕಳವಳ

ಕಲಬುರಗಿ.ಫೆ.21: ಕಲ್ಯಾಣ ಕರ್ನಾಟಕದಲ್ಲಿ ಪೌಷ್ಠಿಕ ಆಹಾರದ ಕೊರತೆಯಿಂದ ಶಿಶುಗಳು ಮತ್ತು ತಾಯಂದಿರ ಮರಣ ಪ್ರಮಾಣ ಹೆಚ್ಚಳ ಹಾಗೂ ಮಕ್ಕಳ ಬೆಳವಣಿಗೆಯು ಕುಂಠಿತವಾಗುತ್ತಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಡಾ. ತಳವಾರ್ ಸಾಬಣ್ಣ ಅವರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನ ವಿಧಾನ ಮಂಡಲದ ಅಧಿವೇಶನದಲ್ಲಿ ಪರಿಷತ್ ಕಲಾಪದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಸಚಿವರಿಗೆ ಪ್ರಶ್ನಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಮಕ್ಕಳು ಪೌಷ್ಠಿಕ ಆಹಾರದ ಕೊರತೆಯಿಂದ ಶಿಶುಗಳು ಮತ್ತು ತಾಯಂದಿರ ಮರಣದ ಪ್ರಮಾಣ ಹೆಚ್ಚಿದೆ. ಇಲ್ಲಿ ಬಡತನದಿಂದ ಕೋಲಿ ಕಾರ್ಮಿಕರಾಗಿ ವಲಸೆ ಹೋಗುವ ಜನರು ಹೆಚ್ಚಿನವರಿದ್ದಾರೆ ಎಂದರು.
ಆದಾಯ ಕಡಿಮೆ ಇರುವುದರಿಂದ ಪೌಷ್ಟಿಕ ಆಹಾರ ಧಾನ್ಯಗಳನ್ನು ಖರೀದಿಸಲು ಆಗುತಿಲ್ಲ. ಈ ಪ್ರದೇಶದಲ್ಲಿ ಮಕ್ಕಳು ಪೌಷ್ಠಕಾಂಶದ ಕೊರತೆಯಿಂದ 35.4 ಪ್ರತಿಶತ (ಎನ್.ಎಫ್.ಹೆಚ್.ಎಸ್-5) ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಕುಂಠಿತಗೊಂಡಿದೆ ಮತ್ತು 60 ಲಕ್ಷದಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 50 ಪ್ರತಿಶತ ಮಹಿಳೆಯರು ಮತ್ತು 65.5ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಟಿಕತೆಯನ್ನು ತಡೆಗಟ್ಟಲು ಹಾಗೂ ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಪ್ರಶ್ನಿಸಿದರು.
ಸಚಿವ ಹಾಲಪ್ಪ ಬಸಪ್ಪ ಆಚಾರ್ ಅವರು ಉತ್ತರಿಸಿ, ಅಂಗನವಾಡಿ ಕೇಂದ್ರಗಳಲ್ಲಿ 6 ತಿಂಗಳಿಂದ 6 ವರ್ಷದ ಮಕ್ಕಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 8ರೂ.ಗಳ ಮೌಲ್ಯದ ಆಹಾರ, ತೀವ್ರ ಅಪೌಷ್ಠಿಕ ಮಕ್ಕಳಿಗೆ 12 ಮೌಲ್ಯದ ಆಹಾರ, ಹಾಲು ಮತ್ತು ಹಾಲಿನ ಪುಡಿ, 3 ದಿನ ಮೊಟ್ಟೆ ಮತ್ತು ಪೌಷ್ಠಿಕ ಪುನರ್ವಸತಿ ಕೇಂದ್ರಗಳಲ್ಲಿ ತೀವ್ರ ಅಪೌಷ್ಠಿಕ ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳು ತೀವ್ರ ಅಪೌಷ್ಠಿಕತೆ (ಎಸ್‍ಎಎಂ) ಹೊಂದಿರುವ ಮಕ್ಕಳ ಆರೋಗ್ಯ ಸುಧಾರಣೆಗೆ 118 ಕೇಂದ್ರಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.
6 ವರ್ಷದ ಎಲ್ಲ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಚುಚ್ಚುಮದ್ದು ಕಾರ್ಯಕ್ರಮ, ಅಂಗನವಾಡಿ ಕೇಂದ್ರಗಳಲ್ಲಿ 3 ತಿಂಗಳಿಂದ ಆರೋಗ್ಯ ತಪಾಸಣೆ, ಮಾತೃಪೂರ್ಣ ಯೋಜನೆಯ ಮೂಲಕ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಪೌಷ್ಠಿಕಯುಕ್ತ ಮಧ್ಯಾಹ್ನದ ಬಿಸಿಯೂಟ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ/ಬಾಣಂತಿಯರಿಗೆ ರೂ. 5000ರೂ.ಗಳ ಹೆರಿಗೆ ಭತ್ಯೆ ಮತ್ತು 2ನೇ ಹೆಣ್ಣು ಮಗುವಾದಲ್ಲಿ ಒಂದೇ ಕಂತಿನಲ್ಲಿ 6000ರೂ.ಗಳಖ ನೇರ ನಗದು ವಗಾವಣೆ ಮಾಡಲಾಗುವುದು. ಯೋಜನೆಗಳ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಜಿಲ್ಲಾಧಿಕಾರಿಗಳ ಸಮಿತಿ, ಆಹಾರ ಗುಣಮಟ್ಟಕ್ಕಾಗಿ ಆರೋಗ್ಯ ಇಲಾಖೆಯ ಪ್ರಯೋಗಾಲಯದಲ್ಲಿ ವಿಶ್ಲೇಷಣೆ, ಅಂಗನವಾಡಿ ಕೇಂದ್ರಗಳಲ್ಲಿ ಬಾಲ ವಿಕಾಸ ಸಮಿತಿ ಹಾಗೂ ಆಹಾರ ಪದಾರ್ಥಗಳ ಕಾಳಸಂತೆ ಮಾರಾಟ ತಡೆಗಟ್ಟಲು ಸಾಗಾಣಿಕೆ ವಾಹನದಲ್ಲಿ ಮಾರ್ಗನಕ್ಷೆ ಪ್ರದರ್ಶನದ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡಲಾಗಿದೆ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.