ಅಪೌಷ್ಟಿಕ ಮಕ್ಕಳನ್ನು ಎನ್‌ಆರ್‌ಸಿಗೆ ದಾಖಲಿಸದಿದ್ದರೆ ಶಿಸ್ತಿನ ಕ್ರಮ : ಡಿಸಿ

ದಾವಣಗೆರೆ ಜ.5: ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಎನ್‌ಆರ್‌ಸಿ ಕೇಂದ್ರಗಳಿಗೆ ದಾಖಲು ಮಾಡಬೇಕು. ತಪ್ಪಿದಲ್ಲಿ ಸಂಬಂಧಿಸಿದ ಸಿಡಿಪಿಓ, ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳಾದ ಪೋಷಣ್ ಅಭಿಯಾನ ಯೋಜನೆ, ಕಿರುಸಾಲ ಯೋಜನೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ ಜಿಲ್ಲಾ ಮಟ್ಟದ ಸಮನ್ವಯ ಸಭೆ, ಬಾಲ್ಯ ವಿವಾಹ ನಿಷೇಧ ಯೋಜನೆ, ಸ್ವಾಧಾರ ಯೋಜನೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.       ಜಿಲ್ಲೆಯಲ್ಲಿನ ತೀವ್ರ ಮತ್ತು ಸಾಧಾರಣ ಸೇರಿದಂತೆ ಒಟ್ಟು 225 ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದೆ. ಯಾವುದೇ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದೆಂದು ಸರ್ಕಾರ ಜಿಲ್ಲಾಸ್ಪತ್ರೆಯಲ್ಲಿ ಎನ್‌ಆರ್‌ಸಿ(ನ್ಯುಟ್ರಿಷನ್ ರಿಹ್ಯಾಬಿಲಿಟೇಷನ್ ಸೆಂಟರ್) ತೆರೆದಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಇದೊಂದು ವರದಾನವಾಗಿದ್ದು, ಮಕ್ಕಳನ್ನು ಎನ್‌ಆರ್‌ಸಿಗೆ ದಾಖಲಿಸಬೇಕು. ತಾಲ್ಲೂಕುಗಳಲ್ಲಿ ಸಿಡಿಪಿಓ ಗಳು, ಅಧೀಕ್ಷಕರು, ವಿಷಯ ನಿರ್ವಾಹಕರು ಈ ಬಗ್ಗೆ ಗಮನ ಹರಿಸಿ, ಪೋಷಕರ ಮನವೊಲಿಸಿ ಈ ಮಕ್ಕಳನ್ನು ಕೇಂದ್ರಕ್ಕೆ ಸೇರಿಸಬೇಕು ಎಂದರು.    ತಾಲ್ಲೂಕುಗಳ ಸಿಡಿಪಿಓ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಪ್ರತಿಕ್ರಿಯಿಸಿ ಪೋಷಕರು ತಮ್ಮ ಮಕ್ಕಳನ್ನು ಕೇಂದ್ರಕ್ಕೆ ಸೇರಿಸಲು ಒಪ್ಪುತ್ತಿಲ್ಲ. ಏನಾದರೊಂದು ಕಾರಣ ಹೇಳುತ್ತಾರೆಂದರು.    ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಸರ್ಕಾರ ಎಷ್ಟೆಲ್ಲಾ ಹಣ ಖರ್ಚು ಮಾಡಿ ಸಿಆರ್‌ಸಿ ತೆರೆದಿದೆ. ಇದೊಂದು ಮುಖ್ಯವಾದ ಯೋಜನೆಯಾಗಿದ್ದು, ಹೇಗಾದರೂ ಪೋಷಕರ ಮನವೊಲಿಸಿ ಮಕ್ಕಳನ್ನು ಎನ್‌ಆರ್‌ಸಿ ದಾಖಲಿಸಿ, ಮಕ್ಕಳನ್ನು ಅಪೌಷ್ಟಿಕತೆಯಿಂದ ಹೊರತರಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.     ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಪೋಷಣ್ ಅಭಿವಯಾನ ಯೋಜನೆಯಡಿ 0 ಯಿಂದ 6 ವರ್ಷಗಳವರೆಗಿನ ಮಕ್ಕಳು, ಕಿಶೋರಿಯರು, ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕತಾ ಮಟ್ಟವನ್ನು ಸುಧಾರಿಸಲು ಸಮುದಾಯ ಆಧಾರಿತ ಚಟುವಟಿಕೆಗಳ ಮೂಲಕ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.    ಪೋಷಣ್ ಅಭಿಯಾನ್ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮುಖಾಮುಖಿ ಸಂವಾದ ಮಾಡಲು ಇ-ಐಎಲ್‌ಎ(ಇನ್ಕಿçಮೆಂಟಲ್ ಲರ್ನಿಂಗ್ ಅಪ್ರೋಚ್) ಮಾಡ್ಯೂಲ್‌ಗಳನ್ನು ಅಭಿವೃದ್ದಿ ಪಡಿಸಿ ತರಬೇತಿ ನೀಡಲಾಗಿದೆ. ಜೊತೆಗೆ ಈ ಯೋಜನೆಯಡಿ ಸುಪೋಷಣಾ ದಿವಸ್, ಅನ್ನಪ್ರಾಶನ ದಿವಸ್, ತೀವ್ರ ಮತ್ತು ಸಾಧಾರಣ ಅಪೌಷ್ಟಕ ಮಕ್ಕಳು ಗುರುತಿಸುವಿಕೆ, ರಕ್ತಹೀನತೆ ಜಾಗೃತಿ ಸಭೆ, ಎದೆಹಾಲಿನ ಮಹತ್ವ, ಜಂತುಹುಳು ನಿವಾರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ವಿವರಣೆ ನೀಡಿದರುಮಾದರಿ ಪೌಷ್ಟಿಕ ಕೈತೋಟ ನಿರ್ಮಿಸಲು ಸೂಚನೆ:  ಅಂಗನವಾಡಿ ಕೇಂದ್ರದಲ್ಲಿ ‘ಪೌಷ್ಟಿಕ ಕೈತೋಟ’ ಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ತಾಲ್ಲೂಕಿನಲ್ಲಿ 5 ರಿಂದ 10 ಉತ್ತಮವಾದ ಪೌಷ್ಟಿಕ ಕೈತೋಟಗಳನ್ನು ನಿರ್ಮಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.   ಹಾಗೂ ಪೋಷಣ್ ಅಭಿಯಾನದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ, ಪಂಚಾಯತ್‌ರಾಜ್, ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ಆಹಾರ ಇಲಾಖೆಗಳು ತಮ್ಮ ಪಾತ್ರವನ್ನು ಸಕ್ರಿಯವಾಗಿ ನಿರ್ವಹಿಸುವ ಮೂಲಕ ಯೋಜನೆಯ ಯಶಸ್ಸಿಗೆ ಸಹಕರಿಸಬೇಕೆಂದರು.ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಪೌಷ್ಟಿಕ ಕೈತೋಟ ನಿರ್ಮಿಸಲು ಅವಶ್ಯಕವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ, 2020-21 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 62 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದ್ದು, ಈ ಪೈಕಿ 61 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಒಂದು ಬಾಲ್ಯ ವಿವಾಹ ನಡೆದಿದ್ದು ಎಫ್‌ಐಆರ್ ದಾಖಲಿಸಲಾಗಿದೆ ಎಂದರು.ಬಾಲ್ಯ ವಿವಾಹ ತಡೆ ತಂಡ ಸಕ್ರಿಯವಾಗಿ ಕೆಲಸ ಮಾಡಬೇಕು : ಡಿಸಿ ಮಾತನಾಡಿ, ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಬಾಲ್ಯ ವಿವಾಹ ಸಂಖ್ಯೆ ಹೆಚ್ಚಿದೆ.  ಕೋವಿಡ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಆರಂಭವಾಗಿಲ್ಲವೆAದು ಎಷ್ಟೋ ಪೋಷಕರು ತಮ್ಮ ಮಕ್ಕಳನ್ನು ಮದುವೆ ಮಾಡುತ್ತಿದ್ದಾರೆ. ಆದ ಕಾರಣ ಬಾಲ್ಯ ವಿವಾಹ ತಡೆ ತಂಡ ಆದಷ್ಟು ಸಕ್ರಿಯವಾಗಿ ಕೆಲಸ ಮಾಡಬೇಕು. ಮುಖ್ಯವಾಗಿ ಪಿಡಿಓಗಳು, ಶಾಲಾ ಮುಖ್ಯಸ್ಥರು ಬಾಲ್ಯ ವಿವಾಹ ತಡೆಗೆ ಸಹಕರಿಸಬೇಕು. ಸಿಡಿಪಿಓ ಗ್ರಾಮ ಲೆಕ್ಕಿಗರು, ಆರ್‌ಐ, ಪೊಲೀಸ್ ಇಲಾಖೆಯವರು, ಎನ್‌ಜಿಓ ಸೇರಿದಂತೆ ತಂಡದ ಎಲ್ಲ ಸದಸ್ಯರು ಬಾಲ್ಯ ವಿವಾಹ ತಡೆಗೆ ಶ್ರಮಿಸಬೆಕೆಂದರು.ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, 2020-21 ನೇ ಸಾಲಿನಲ್ಲಿ ಜಗಳೂರಿನಲ್ಲಿ 6, ದಾವಣಗೆರೆಯಲ್ಲಿ 18, ಹೊನ್ನಾಳಿಯಲ್ಲಿ 15, ಚನ್ನಗಿರಿಯಲ್ಲಿ 14 ಮತ್ತು ಹರಿಹರದಲ್ಲಿ 9 ಪ್ರಕರಣ ದಾಖಲಾಗಿದೆ. ಮುಂದುವರೆದ ತಾಲ್ಲೂಕುಗಳಲ್ಲೇ ಹೆಚ್ಚಾಗಿ ಪ್ರಕರಣ ದಾಖಲಾಗಿದ್ದು, ಬಾಲ್ಯ ವಿವಾಹ ತಡೆಗೆ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರ ತಂಡ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಬಾಲ್ಯ ವಿವಾಹ ತಡೆಗೆ ಜನನ ದಿನಾಂಕ ನೀಡುವಲ್ಲಿ ಪಾಮೇನಳ್ಳಿ ಶಾಲಾ ಮುಖ್ಯೋಪಾಧ್ಯಾಯರು ಸಹಕರಿಸಲಿಲ್ಲವೆಂದು ಮಕ್ಕಳ ಸಹಾಯವಾಣಿಯವರು ತಿಳಿಸಿದ್ದು, ಇನ್ನು ಮುಂದೆ ಹಾಗೆ ಅಸಹಕರಾರ ತೋರಿದವರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಬಾಡಿಗೆ ಕಟ್ಟಡ ಬೇಡ : ಜಿಲ್ಲೆಯಲ್ಲಿ ಒಟ್ಟು 1721 ಅಂಗನವಾಡಿ ಕಟ್ಟಡಗಳಿದ್ದು ನಗರದಲ್ಲೇ 375 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ನಡೆಸುವುದು ಬೇಡ. ಸರ್ಕಾರಿ ಜಮೀನು ನೀಡಲಾಗುವುದು. ಎಸ್‌ಸಿಪಿ/ಟಿಎಸ್‌ಪಿ ಮತ್ತು ಇತರೆ ಯೋಜನೆಗಳಡಿ ಕಟ್ಟಡಗಳನ್ನು ನಿರ್ಮಿಸಬೇಕು. ಹಾಗೂ ಶಾಲೆಗಳ ಹೆಚ್ಚುವರಿ ಕಟ್ಟಡವನ್ನು ಅಂಗನವಾಡಿ ಕಟ್ಟಡವಾಗಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಇನ್ನು ಮುಂದೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸಬಾರದು. ಆದಷ್ಟು ಶೀಘ್ರದಲ್ಲೇ ಜಾಗ ಗುರಿತಿಸಿ ಸ್ವಂತ ಕಟ್ಟಡಗಳನ್ನು ಹೊಂದಬೇಕೆAದು ಸೂಚನೆ ನೀಡಿದ ಅವರು ತಾವು, ಸಿಇಓ ಅಂಗನವಾಡಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡುವುದಾಗಿ ತಿಳಿಸಿದರು.ಇದೇ ವೇಳೆ ಬಾಲ್ಯ ವಿವಾಹ ತಡೆಗೆ ಸಂಬಂಧಿಸಿದ ಕೈಪಿಡಿಯನ್ನು ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಸೇರಿದಂತೆ ಅಧಿಕಾರಿಗಳು ಬಿಡುಗಡೆ ಮಾಡಿದರು.   ಸಭೆಯಲ್ಲಿ ಡಿವೈಎಸ್‌ಪಿ ಬಿ.ಎಸ್.ಬಸವರಾಜ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಸಿ.ಬಸವರಾಜಯ್ಯ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಲೋಕೇಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೌಸರ್ ರೇಷ್ಮಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶೃತ ಡಿ.ಶಾಸ್ತಿç, ಶಿಕ್ಷಣ ಇಲಾಖೆ ಇಓ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂರಕ್ಷಣಾಧಿಕಾರಿಗಳಾದ ಪೂರ್ಣಿಮಾ, ಸುಶೀಲಮ್ಮ, ಮಕ್ಕಳ ಸಹಾಯವಾಣಿಯ ಕೊಟ್ರೇಶ್, ವಿವಿಧ ಎನ್‌ಜಿಓ ಗಳ ಪದಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು