ಅಪೌಷ್ಟಿಕತೆ ಮುಕ್ತ ಕರ್ನಾಟಕಕ್ಕೆ ಸಾರವರ್ಧಿತ ಅಕ್ಕಿ ಬಳಸಿ

ಕಲಬುರಗಿ,ಜು.28: ವಿಟಾಮಿನ್ ಬಿ-12, ಕಬ್ಬಿಣಾಂಶ, ಫೋಲಿಕ್ ಆಸಿಡ್ ಒಳಗೊಂಡ ಸೂಕ್ಷ್ಮ ಪೆÇೀಷಕಾಂಶಗಳುಳ್ಳ ಸಾರವರ್ಧಿತ (ಬಲವರ್ಧಿತ) ಅಕ್ಕಿಯನ್ನು ಉಪಯೋಗಿಸುವ ಮೂಲಕ ಅಪೌಷ್ಠಿಕತೆ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಬೇಕು ಎಂದು ನವದೆಹಲಿಯ ಪಾತ್ ಇಂಡಿಯಾ ಸಂಸ್ಥೆಯ ಆರೋಗ್ಯ ಉಪನ್ಯಾಸಕ ಸತ್ಯಭ್ರತ ಪಾದಿ ಹೇಳಿದರು.
ಗುರುವಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಪಾತ್ ಇಂಡಿಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಡಿ.ಸಿ ಕಚೇರಿ ಸಭಾಂಗಣದಲ್ಲಿ ಆಹಾರ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳಿಗೆ ಮತ್ತು ನ್ಯಾಯ ಬೆಲೆ ಅಂಗಡಿ ವರ್ತಕರಿಗೆ ಆಯೋಜಿಸಿದ ಸಾರವರ್ಧಿತ ಅಕ್ಕಿಯ ಸಂವೇದನಾಶೀಲತೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಸಾಮಾನ್ಯ ಅಕ್ಕಿಗಳು ಪಾಲಿಶ್ ಮಾಡುವ ಕಾರಣ ಅದರಲ್ಲಿ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶಗಳು ಮತ್ತು ವಿಟಾಮಿನ್ ಇರುವುದಿಲ್ಲ. ವಿಟಾಮಿನ್ ಇಲ್ಲದ ಅಕ್ಕಿ ಸೇವನೆಯಿಂದ ರಕ್ಷಹೀನತೆ, ಕಬ್ಬಿನಾಂಶದ ಕೊರತೆ, ರಾತ್ರಿ ದೃಷ್ಠಿಹೀನ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಸಾರವರ್ಧಿತ ಅಕ್ಕಿ ಬಳಸುವುದರಿಂದ ಇದು ದೂರವಾಗಲಿವೆ. ಇನ್ನೂ 100 ಕೆ.ಜಿ. ಸಾಮಾನ್ಯ ಅಕ್ಕಿಯಲ್ಲಿ ಒಂದು ಕೆ.ಜಿ. ಸಾರವರ್ಧಿತ ಅಕ್ಕಿ ಮಾತ್ರ ಮಿಶ್ರಣ ಮಾಡಲಾಗುತ್ತಿದೆ. ಇಂತಹ ಸೂಕ್ಷ್ಮ ವಿಚಾರವನ್ನು ಸಾರ್ವಜನಿಕರಿಗೆ ತಿಳಿಹೇಳುವ ಕೆಲಸ ನ್ಯಾಯ ಬೆಲೆ ಅಂಗಡಿಯವರು ಮಾಡಬೇಕು. ಜನಜಾಗೃತಿ ಪೋಸ್ಟರ್‍ಗಳನ್ನು ಅಂಗಡಿ ಮುಂದೆ ಪ್ರದರ್ಶಿಸಬೇಕು ಎಂದರು.
2021ರ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2024ರ ಹೊತ್ತಿಗೆ ದೇಶದಲ್ಲಿನ ಅಪೌಷ್ಠಿಕತೆ ಹೋಗಲಾಡಿಸಲು ಪಿ.ಎಂ.ಪೋಷಣ್, ಪೋಷಣ್ ಅಭಿಯಾನದ ಜೊತೆಗೆ ಪಡಿತರ ಅಂಗಡಿ ಮೂಲಕ ಜನತೆಗೆ ಸಾರವರ್ಧಿತ (ಬಲವರ್ಧಿತ) ಅಕ್ಕಿ ನೀಡಬೇಕೆಂದು ಘೋಷಿಸಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ. ಈ ಕುರಿತು ಪಾತ್ ಇಂಡಿಯಾ ಸಂಸ್ಥೆ ಸಹ ವಿವಿಧ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಯೋಜನೆ ಸಾಕಾರಗೊಳ್ಳಲು ಜನಜಾಗೃತಿ ಮೂಡಿಸುತ್ತಿದೆ ಎಂದರು.
ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ “5”ರಂತೆ ದೇಶದಲ್ಲಿ ಈಗಾಗಲೆ ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶೇ.100ರಷ್ಟು ಸಾರವರ್ಧಿತ ಅಕ್ಕಿ ನೀಡಲಾಗುತ್ತಿದೆ. ಅಪೌಷ್ಠಿಕತೆ ಹೆಚ್ಚಿರುವ ಮತ್ತು ಮಹತ್ವಕಾಂಕ್ಷೆ ಜಿಲ್ಲೆಗಳಲ್ಲಿ ಪಡಿತರ ಅಂಗಡಿ ಮೂಲಕ ಸಾರ್ವಜನಿಕರಿಗೆ ಇದೀಗ ಸಾರವರ್ಧಿತ ಅಕ್ಕಿ ನೀಡಲಾಗುತ್ತಿದ್ದು, 2024ರ ಹೊತ್ತಿಗೆ ಸರ್ವರಿಗೆ ಮುಕ್ತ ಮಾರುಕಟ್ಟೆಯಲ್ಲಿ ಈ ಅಕ್ಕಿ ದೊರೆಯಲಿದೆ ಎಂದು ಸತ್ಯಭ್ರತ ಪಾದಿ ಅವರು ವಿಶ್ವಾಸ ವ್ಯಕ್ತಪಡಿಸದರು.
ಅಪೌಷ್ಠಿಕತೆ ಹೆಚ್ಚಿರುವ ರಾಜ್ಯದ ಕಲಬುರಗಿ ಸೇರಿದಂತೆ ಬಳ್ಳಾರಿ, ಬೀದರ, ರಾಯಚೂರು, ಯಾದಗಿರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಚಿಕ್ಕಬಳ್ಳಾಪೂರ, ದಾವಣಗೆರೆ, ಗದಗ, ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ಹೀಗೆ 14 ಜಿಲ್ಲೆಗಳಲ್ಲಿ ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆ ಹೊರತಾಗಿ ಪಡಿತರ ಅಂಗಡಿ ಮೂಲಕ ಈ ಅಕ್ಕಿ ನೀಡುತ್ತಿದ್ದು, ಒಟ್ಟಾರೆ ರಾಜ್ಯದಲ್ಲಿ ಶೇ.43ರಷ್ಟು ಜನರಿಗೆ ಸಾರವರ್ಧಿತ ಅಕ್ಕಿ ತಲುಪುತ್ತಿದೆ ಎಂದು ಸತ್ಯಭ್ರತ ಪಾದಿ ತಿಳಿಸಿದರು.
ಪ್ಲಾಸ್ಟಿಕ್ ಅಕ್ಕಿ ಅಲ್ಲ: ಜಿಲ್ಲೆಯಲ್ಲಿ ಪಡಿತರ ಅಂಗಡಿ ಮೂಲಕ ಇತರೆ ಅಕ್ಕಿ ಜೊತೆಗೆ ಮಿಶ್ರಣ ಮಾಡಿ ನೀಡಲಾಗುತ್ತಿರುವ ಸಾರವರ್ಧಿತ ಅಕ್ಕಿ ಪ್ಲಾಸ್ಟಿಕ್ ಅಕ್ಕಿ ಅಲ್ಲ, ಪ್ಲಾಸ್ಟಿಕ್ ಹೊಳಪು ಮಾತ್ರ ಹೊಂದಿದೆ. 12 ರಿಂದ 18 ತಿಂಗಳ ವರೆಗೆ ಶೇಖರಣೆ ಇಟ್ಟು ಯಾವುದೇ ಆತಂಕವಿಲ್ಲದೆ ಇದನ್ನು ಸೇವಿಸಬಹುದು. ಸಾರವರ್ಧಿತ ಅಕ್ಕಿ ನೀರಿನಲ್ಲಿ ತೇಲುತ್ತದೆ ಎಂಬುದಕ್ಕೂ ಸ್ಪಷ್ಟನೆ ನೀಡಿದ ಸತ್ಯಭ್ರತ ಪಾದಿ ಅವರು, ಸಾಮಾನ್ಯವಾಗಿ ಎಲ್ಲಾ ಪಡಿತರ ಅಂಗಡಿಯಿಂದ ಪಡೆದ ಅಕ್ಕಿಯಲ್ಲಿ ಹೀಗಾಗುವುದಿಲ್ಲ. ಸಾರವರ್ಧಿತ ಅಕ್ಕಿ ತಯ್ಯಾರಿಸುವ ಸಂದರ್ಭದಲ್ಲಿ ಕಂಪನಿಗಳು ಗುಣಮಟ್ಟದಲ್ಲಿ ಏರಿಳಿತ ಮಾಡಿದಲ್ಲಿ ಎಲ್ಲೋ ಒಂದು ಕಡೆ ಹೀಗಾಗುತ್ತದೆ. ಇದರಿಂದ ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ ಎಂದರು.
+ಈ ಲೋಗೋ ಇರುವುದನ್ನು ಬಳಸಲು ಸಲಹೆ: ಅಕ್ಕಿ, ಖಾದ್ಯ ತೈಲ, ಉಪ್ಪು, ಹಾಲು ಹಾಗೂ ಗೋಧಿ ಹಿಟ್ಟಿನ ಪ್ಯಾಕೆಟ್ ಮೇಲೆ +ಈ ಲೋಗೋ ಇದ್ದಲ್ಲಿ ಅದು ಎಫ್.ಎಸ್.ಎಸ್.ಎ.ಐ ಸಂಸ್ಥೆ ಅನುಮೋದಿತ ಸಾರವರ್ಧಿತ ಉತ್ಪನ್ನವಾಗಿರುತ್ತದೆ. ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಇವುಗಳನ್ನು ಬಳಸುವಂತೆ ಸತ್ಯಭ್ರತ ಪಾದಿ ಅವರು ಸಲಹೆ ನೀಡಿದರು.
ಇದಕ್ಕು ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಮಾತನಾಡಿ, ದೇಶದಲ್ಲಿ 2-1 ರಂತೆ ಮಕ್ಕಳು ಅಪೌಪ್ಠಿಕತೆಯಿಂದ ಬಳಲುತ್ತಿದ್ದು ಇದ್ದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪಡಿತರ ಆಹಾರ ಧ್ಯಾನಗಳಲ್ಲಿ ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ, ಫೋಲಿಕ್ ಆಸಿಡ್, ಹಲವಾರು ಜೀವಸತ್ವ ಮತ್ತು ಖನಿಜಗಳನ್ನು ಸೇರಿಸಿ ನೀಡಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಯು. ಮಾತನಾಡಿ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಶೇ.100 ರಷ್ಟು ಸಾರವರ್ಧಿತ ಅಕ್ಕಿ ವಿತರಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಾಜಕುಮಾರ ರೇಡಿ, ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಲಬುರಗಿ ತಾಲೂಕಾ ಆಹಾರ ಸುರಕ್ಷತಾಧಿಕಾರಿ ಕಿರಣಕುಮಾರ ಛಲವಾದಿ, ಆಹಾರ ಸುರಕ್ಷತಾಧಿಕಾರಿ ಪರಮೇಶ್ವರ ಮಠಪತಿ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ರವಿ ಎಂ. ಬೆಹರೆ, ವ್ಯವಸ್ಥಾಪಕ ಅಲ್ಲಾಭಕμï ಸೇರಿದಂತೆ ಜಿಲ್ಲೆಯ ನ್ಯಾಯ ಬೆಲೆ ಅಂಗಡಿ ವರ್ತಕರು, ಆಹಾರ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಇದ್ದರು.