ಅಪೌಷ್ಟಿಕತೆಯ ನಿರ್ಮೂಲನೆಗೆ ಸಹಕಾರ ನೀಡಿ

ರಾಯಚೂರು,ಮಾ.೧೮- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯಾಧ್ಯಂತ ನಾಲ್ಕು ಲಕ್ಷಕ್ಕೂ ಅಧಿಕ ಕುಟುಂಬಗಳ ಅಪೌಷ್ಟಿಕತೆ ಮತ್ತು ಆರೋಗ್ಯದ ವಿಚಾರಗಿ ಆನ್ ಲೈನ್ ಮೂಲಕ ನೊಂದಣಿ ಮಾಡಿಕೊಂಡು ಸೂಕ್ತ ಮಾಹಿತಿಯನ್ನು ಕಲೆ ಹಾಕುತ್ತಿದ್ದು ಹಾಗಾಗಿ ಸಾರ್ವಜನಿಕರು ತಮ್ಮ ಮನೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಅಥವಾ ವ್ಯಕ್ತಿಯ ಮಾಹಿತಿಯನ್ನು ಸರಿಯಾಗಿ ನೀಡುವ ಮೂಲಕ ಕುಟುಂಬವನ್ನು ಆರೋಗ್ಯವಂತವರನ್ನಾಗಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶಶಿಧರ ಕುರೇರ ಅವರು ತಿಳಿಸಿದರು.
ಅವರು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಜಂಟಿಯಲ್ಲಿ ಆಯೋಜಿಸಿದ್ದ ಅಪೌಷ್ಠಿಕತೆಯ ಮಕ್ಕಳು, ಯುವಕರು, ಗರ್ಭಿಣಿಯರು ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ಜಿಲ್ಲೆಯಾದ್ಯಂತ ನಾಲ್ಕು ಲಕ್ಷಕ್ಕೂ ಅಧಿಕ ಕುಟುಂಬಗಳ ಪ್ರತಿ ಮನೆಮನೆಗೂ ತೆರಳಿ ನಮ್ಮ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕರು ಪ್ರತಿ ಮನೆಯ ಒಂದು ವರ್ಷದಿಂದ ೧೦ ವರ್ಷದ ಮಗು ಹಾಗೂ ೧೦ ವರ್ಷದಿಂದ ೧೯ ವರ್ಷದ ಯುವತಿ, ಯುವಕರು ಮತ್ತು ಗರ್ಭಿಣಿಯರು, ಸ್ತ್ರೀಯರು ಆರೋಗ್ಯ ಮತ್ತು ಅಪೌಷ್ಟಿಕತೆಯ ಬಗ್ಗೆ ಆನ್‌ಲೈನ್ ಮೂಲಕ ಅದರ ಮಾಹಿತಿಯನ್ನು ಸರ್ಕಾರಕ್ಕೆ ನೀಡಲು ಆಗಮಿಸುತ್ತಿದ್ದು, ಎಲ್ಲರೂ ಸಹಕರಿಸಬೇಕು ಹಾಗೆಯೇ ವೈಯಕ್ತಿಕವಾಗಿಯೂ ಕೂಡ ಆನ್‌ಲೈನ್ ಮೂಲಕ ನಿಮ್ಮ ಆರೋಗ್ಯದ ಮಾಹಿತಿ ನೀಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಂದಿತಾ, ತಾಲೂಕು ವೈದ್ಯಾಧಿಕಾರಿ ಡಾ.ಶಾಕಿರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕ ಅಧಿಕಾರಿ ಮಹೇಶ್, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.