ಅಪೌಷ್ಟಿಕತೆಯ ನಿರ್ಮೂಲನೆಗೆ ಉತ್ತಮ ಆರೋಗ್ಯ ಅವಶ್ಯಕ : ಎಂ.ಎಲ್ ವೈಶಾಲಿ

ಶಿವಮೊಗ್ಗ, ಏಪ್ರಿಲ್ 16:  ಮಕ್ಕಳ ಬೆಳವಣಿಗೆಗೆ ಮಾರಕವಾಗಿರುವ ಮತ್ತು ಪೌಷ್ಟಿಕಾಂಶ ಹೀರಿ ಬೆಳೆಯುವ ಜಂತು ಹುಳುಗಳ ನಿವಾರಣೆಗಾಗಿ ಅಲ್ಪೆಂಡಝೋಲ್ ಮಾತ್ರೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಸೇವಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್ ವೈಶಾಲಿ ಹೇಳಿದರು. ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿ, ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಡಶಾಲಾ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗದ ಬಿ.ಹೆಚ್. ರಸ್ತೆಯಲ್ಲಿರುವ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಸಮುದಾಯ ಆಧಾರಿತ ರಾಷ್ಟಿçÃಯ ಜಂತು ಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಬಯಲು ಶೌಚದಿಂದಾಗಿ ಬರಿಗಾಲಿನಲ್ಲಿ ನಡೆದಾಗ ಹಾಗೂ ಕಲುಷಿತ ಕೈಗಳಿಂದ ಆಹಾರ ಸೇವನೆ ಮಾಡುವುದರಿಂದ ಜಂತುಹುಳುಗಳು ದೇಹದ ಒಳಗೆ ಪ್ರವೇಶಿಸಿ ಕರುಳಿನಲ್ಲಿ ವಾಸಿಸುವ ಜೀವಿಗಳಾಗಿ ಬೆಳೆಯುತ್ತವೆ. ಇವುಗಳು ಮಕ್ಕಳಲ್ಲಿನ ಪೌಷ್ಟಿಕಾಂಶ ಹೀರುವುದರಿಂದ ಮಕ್ಕಳಲ್ಲಿ ರಕ್ತ ಹೀನತೆ ಉಂಟಾಗುತ್ತದೆ. ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಶಾಲೆಯ ಮಕ್ಕಳಲ್ಲಿನ ಕಲಿಕಾ ಸಾಮರ್ಥ್ಯ ಮತ್ತು ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಜಂತು ಹುಳುಗಳು ದೇಹದ ಒಳಗೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್. ರಮೇಶ್, ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿ ಜಂತು ಹುಳುಗಳ ನಿವಾರಣೆಗಾಗಿ ಪ್ರತಿಯೊಬ್ಬ ಮಗುವು ಅಲ್ಪೆಂಡಝೋಲ್ ಮಾತ್ರೆಯನ್ನು ಸೇವಿಸಲು ನಿಗವಹಿಸಬೇಕು ಹಾಗೂ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಅನುಷ್ಟಾನಗೊಳಿಸಿರುವ ಇಂತಹ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಹಾಗೂ ತಮ್ಮ ಸುತ್ತಮುತ್ತಲಿನ ಜನರಿಗೆ ಈ ಕುರಿತು ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು. ಏಪ್ರಿಲ್ 16ರಿಂದ 30ರ ವರೆಗೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಬೇಟಿ ನೀಡಿ 1-19 ವರ್ಷದ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಲಿದ್ದಾರೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಚಂದ್ರಶೇಖರ್ ಹೇಳಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಶಿಕ್ಷಣಾಧಿಕಾರಿ ಪ್ರತಿಮಾ, ಆರ್.ಸಿ.ಹೆಚ್.ಒ ನಾಗರಾಜ ನಾಯರ್, ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಸರಸ್ವತಿ ಎಸ್.ಜಿ, ಮತ್ತು ಪ್ರಾಂಶುಪಾಲ ಕೃಷ್ಣಪ್ಪ, ಪ್ರಭಾರ ಡಿಡಿ ಸುರೇಶ್, ಡಿವೈಹೆಚ್‌ಇ ಕೃಷ್ಣರಾವ್ ಕಾಳೆ ಸೇರಿದಂತೆ ಅನೇಕ ಗಣ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.