ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ :ಮುದುಗಲ್


ಸಂಜೆ ವಾಣಿ ವಾರ್ತೆ
ಕೊಟ್ಟೂರು:  ತಾಲೂಕಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 46 ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಎಂದು ಅಂಗನವಾಡಿಯ ಮುಖ್ಯ ಮೇಲ್ವಿಚಾರಕಿಗೆ ತಾಲೂಕು ಪಂಚಾಯತಿಯ ಆಡಳಿತ ಅಧಿಕಾರಿಯಾದ ಶರಣಪ್ಪ ಮುದುಗಲ್ ತಾಕೀತು ಮಾಡಿದರು.
  ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಆಡಳಿತಾಧಿಕಾರಿ ಶರಣಪ್ಪ ಮುದುಗಲ್ ಅಪೌಷ್ಟಿಕತೆಯಿಂದ ಬಳಲು ಕಾರಣವೇನು ಎಂದು ಕೇಳಿದಾಗ ಅದರ ಉತ್ತರವಾಗಿ ವೈದ್ಯಾಧಿಕಾರಿ ಪ್ರದೀಪ್ ಮಾತನಾಡಿ ಕೋವಿಡ್ ಸಮಯದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ನಡೆದಿದ್ದವು ಅದರೆ ಹಿನ್ನೆಲೆಯಲ್ಲಿ ಮಕ್ಕಳು  ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು. ಆಗ ಆಡಳಿತಾಧಿಕಾರಿ ಅಂಗನವಾಡಿ ಮೇಲ್ವಿಚಾರಕರಿಗೆ ಬಾಲ್ಯ ವಿವಾಹ ಕಂಡು ಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಿ, ಬಾಲ್ಯ ವಿವಾಹ ನಡೆಯದಂತೆ ತಡೆಗಟ್ಟಲು ಮುಂದಾಗಬೇಕು ಎಂದು ತಾಕೀತು ಮಾಡಿದರು.
   ಗ್ರಾಮಗಳಲ್ಲಿ ಕಲುಷಿತ ನೀರು ಪೂರೈಕೆ ಮಾಡಿದಲ್ಲಿ ಆಯಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೆ ಹೊಣೆಯಾಗುತ್ತಾರೆ
ನೀರನ್ನು ಶುದ್ಧಿಕರಿಸಿ ಸರಬರಾಜು ಮಾಡಬೇಕು, ನಳಗಳನ್ನು ಅಳವಡಿಸಿ ನೀರು ಪೋಲಾಗುವುದನ್ನು ನಿಯಂತ್ರಿಸಿ, ನೀರಿನ ಟ್ಯಾಂಕ್ ಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪಿಡಿಒ ಗಳೇ ನೇರ ಹೊಣೆ ಎಂದು ತಿಳಿಸಿದರು.
ಕೊಟ್ಟೂರು ಕೆರೆಗೆ ದಾರಿ ನಿರ್ಮಿಸಿ ತೂಬುಗಳನ್ನು ರಿಪೇರಿ ಮಾಡಿ ನೀರು ಸೋರಿಕೆಯಾಗುವುದನ್ನು ತಡೆಗಟ್ಟಿ ಕೆರೆ ದಂಡೆಯಲ್ಲಿ ಗಿಡಮರಗಳನ್ನು ಬೆಳೆಸಿ ಸುಂದರ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಮಳೆ ಬಾರದ ಹಿನ್ನೆಲೆಯಲ್ಲಿ ಬೀಜ, ರಸಗೊಬ್ಬರ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ, ಈಗಾಗಲೇ 1400 ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖಾಧಿಕಾರಿ ಸಭೆಯಲ್ಲಿ ವಿವರಿಸಿದಾಗ ಆಡಳಿತಾಧಿಕಾರಿ ಮಾತನಾಡಿ ಮಳೆಯ ಮುನ್ಸೂಚನೆಯನ್ನು ರೈತರಿಗೆ ತಿಳಿಸಿರಿ ಹಾಗೂ ನಕಲಿ ಬೀಜಗಳ ಮಾರಾಟ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಎಚ್ಚರಿಸಿದರು.
ಗ್ರಾಮೀಣ ಪ್ರದೇಶಗಲ್ಲಿ ಹಗಲಿನೊತ್ತು ಬೀದಿ ದೀಪಗಳು ಉರಿಯುತ್ತಿರುವುದನ್ನು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಾಗ ಜೆಸ್ಕಾಂ ಅಧಿಕಾರಿ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ತಿಳಿಸಿದರು. ತಾಲ್ಲೂಕಿನ ಎಲ್ಲಾ ಇಲಾಖೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ಆಡಳಿತಾಧಿಕಾರಿಗಳು ನೀಡಿದರು.
ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯ್ತಿ ಎರಡು ಕಚೇರಿಗಳನ್ನು ಬಿಟ್ಟರೆ ಯಾವುದೇ ತಾಲ್ಲೂಕು ಮಟ್ಟದ ಕಚೇರಿಗಳು ಕೊಟ್ಟೂರಿನಲ್ಲಿ ಪ್ರಾರಂಭಿಸದಿರುವುದರಿಂದ ಕೂಡ್ಲಿಗಿ ತಾಲ್ಲೂಕು ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿಗಳನ್ನು ಸಭೆಗೆ ಕಳುಹಿಸುವುದರಿಂದ ಕೊಟ್ಟೂರು ತಾಲ್ಲೂಕಿಗೆ ಸಂಬಂಧಿಸಿದಂತೆ ನಿಖರ ಅಂಕಿ ಅಂಶಗಳು ಹಾಗೂ ಮಾಹಿತಿ ಸಭೆಯಲ್ಲಿ ನೀಡದಿರುವುದು ಮೇಲ್ನೋಟಕ್ಕೆ ಕಂಡು ಬಂದಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿ.ಪರಮೇಶ್ವರ, ಸಹಾಯಕ ನಿರ್ದೇಶಕ ಎಚ್.ವಿಜಯಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

One attachment • Scanned by Gmail