ಅಪೂರ್ಣ ಕಾಮಗಾರಿ: ಆರೋಪ

ಲಕ್ಷ್ಮೇಶ್ವರ,ನ21: ಸಮೀಪದ ದೊಡ್ಡೂರು ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದೆ’ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ದೇವಪ್ಪ ತೋಟದ ಮತ್ತು ಫಕ್ಕೀರಪ್ಪ ಹಿರೇತನದ ಆರೋಪಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು ‘ಲಕ್ಷ್ಮೇಶ್ವರದಿಂದ ದೊಡ್ಡೂರು ಮಾರ್ಗವಾಗಿ ಯಲ್ಲಾಪುರ ಗ್ರಾಮದವರೆಗೆ ರಸ್ತೆ ನಿರ್ಮಿಸಲು ಅನುದಾನ ಬಿಡುಗಡೆ ಆಗಿತ್ತು. ಆದರೆ ಸೂರಣಗಿ ಕ್ರಾಸ್‍ನಿಂದ ದೊಡ್ಡೂರಿನ ಹರಿಜನಕೇರಿವರೆಗೆ ಸಿಸಿ ಮತ್ತು ಚರಂಡಿ ಕಾಮಗಾರಿ ಕಳಪೆ ಆಗಿದೆ. ಗುತ್ತಿಗೆದಾರರು ತಮಗೆ ತೋಚಿದಂತೆ ಕೆಲಸ ಮಾಡಿದ್ದಾರೆ. ವೈಜ್ಞಾನಿಕವಾಗಿ ಚರಂಡಿ ಕಟ್ಟದಿರುವುದರಿಂದ ಮಳೆಗಾಲದಲ್ಲಿ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಅಲ್ಲದೆ ಚವಡಿ ಹತ್ತಿರ ಚರಂಡಿಯನ್ನು ಎತ್ತರವಾಗಿ ಕಟ್ಟಿದ್ದರೆ ಎದುರಿಗೆ ಕೆಳಮಟ್ಟದಲ್ಲಿದೆ. ಹೀಗಾಗಿ ನೀರು ಸರಾಗವಾಗಿ ಹರಿದುಹೋಗದೆ ನಿಂತಲ್ಲಿಯೇ ನಿಲ್ಲುತ್ತಿದೆ. ಕೆಲಸವನ್ನು ಪೂರ್ಣ ಮಾಡುವಂತೆ ಒತ್ತಾಯಿಸಿದರೂ ಗುತ್ತಿಗೆದಾರರಾಗಲಿ ಅಥವಾ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ ತಿರುಗಿ ನೋಡುತ್ತಿಲ್ಲ. ವಿನಾಕಾರಣ ಗ್ರಾಮಸ್ಥರು ಮಾತ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಜಿಲ್ಲಾಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
**