ಅಪಾರ ನಗದು, ಸಾiಗ್ರಿ ವಶ

ಬೆಂಗಳೂರು,ಏ.೧:ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ ಚುನಾವಣಾ ಆಯೋಗ ಅಕ್ರಮಗಳ ತಡೆಗೆ ಹದ್ದಿನ ಕಣ್ಣಿಟ್ಟಿದ್ದು, ರಾಜ್ಯದೆಲ್ಲೆಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಿ, ನಿತ್ಯವೂ ದಾಖಲೆಗಳಿಲ್ಲದ ಹಣ ವಶ, ಮತದಾರರಿಗೆ ನೀಡಲು ಸಂಗ್ರಹಿಸಿಟ್ಟಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದು. ಇಂದೂ ಸಹ ಕೊಪ್ಪಳ, ಉತ್ತರ ಕನ್ನಡ, ತುಮಕೂರು ಜಿಲ್ಲೆಗಳಲ್ಲಿ ಬೆಳ್ಳಿಯ ವಸ್ತುಗಳು, ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ೬೬ರ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿ ದಾಖಲೆಗಳಿಲ್ಲದ ೧೪ ಲಕ್ಷಕ್ಕೂ ಹಣವನ್ನು ಇಂದು ಜಪ್ತಿ ಮಾಡಲಾಗಿದೆ.ಉಡುಪಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಕಾರಿನಲ್ಲಿ ೧೪ ಲಕ್ಷ ರೂ.ಹಣ ಸಿಕ್ಕಿದೆ. ಈ ಸಂಬಂಧ ಭಟ್ಕಳ ಮೂಲಕ ಯಶವಂತ್‌ಗೊಂಡ, ಹೊನ್ನಾವರದ ಶ್ರೀನಿವಾಸ್‌ಗೌಡ, ರಘುನಾಯಕ ಎಂಬುವರನ್ನು ಬಂಧಿಸಿ ಭಟ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೊಪ್ಪಳದಲ್ಲಿ ೧೬ ಕೆಜಿ ಚಿನ್ನ
ಕೊಪ್ಪಳದಲ್ಲಿ ಪೊಲೀಸರು ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬೆಳ್ಳಿ ಮತ್ತು ಹಣವನ್ನು ತರುತ್ತಿದ್ದ ಇಬ್ಬರು ಉದ್ಯಮಿಗಳನ್ನು ವಶಕ್ಕೆ ಪಡೆದು ಅವರಿಂದ ೯.೬೭ ಲಕ್ಷ ರೂ. ಮೌಲ್ಯದ ಬೆಳ್ಳಿವಸ್ತು ಹಾಗೂ ೧.೧೦ ಲಕ್ಷ ಮೌಲ್ಯದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಪೊಲೀಸರು ಉದ್ಯಮಿಗಳಾದ ಕೈಲಾಸ್‌ಜೈನ್ ಮತ್ತು ದೇವಿಚಂದ್ರಜೈನ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ತುಮಕೂರಿನಲ್ಲಿ ಎಲ್‌ಇಡಿ ಬಲ್ಬ್ ವಶ
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಬಂಡಿಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ೬.೮೪ ಲಕ್ಷ ರೂ.ಮೌಲ್ಯದ ಎಲ್‌ಇಡಿ ಬಲ್ಬ್‌ಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದವರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ತಿಪಟೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನಲ್ಲೂ ಕಾರ್ಯಾಚರಣೆ
ಬೆಂಗಳೂರಿನಲ್ಲೂ ಜಾಗೃತ ದಳದವರು ಕಾರ್ಯಾಚರಣೆ ನಡೆಸಿ ದಾಸರಹಳ್ಳಿಯ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಆರ್. ಮಂಜುನಾಥ್ ಅವರ ಭಾವಚಿತ್ರವಿರುವ ೮.೫ ಲಕ್ಷ ಮೌಲ್ಯದ ೬೧೨ ಪ್ರೆಷರ್‌ಕುಕ್ಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುಕ್ಕರ್‌ಗಳನ್ನು ಮಿನಿ ಟ್ರಕ್‌ವೊಂದರಲ್ಲಿ ಸಾಗಿಸಲಾಗುತ್ತಿತ್ತು, ಹಾಗೆಯೇ, ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್‌ಶೆಟ್ಟಿ ಅವರ ಮನೆಯಿಂದ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಜಿಎಸ್‌ಟಿ ತಂಡ ವಶಪಡಿಸಿಕೊಂಡಿತ್ತು. ಈ ಸಂಬಂಧ ಚುನಾವಣಾಧಿಕಾರಿ ವರಲಕ್ಷ್ಮಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಚುನಾವಣಾ ಜಾಗೃತ ದಳದ ಅಧಿಕಾರಿಗಳು ನಿನ್ನೆ ಧರ್ಮಸ್ಥಳ ಮಂಜುನಾಥಸ್ವಾಮಿ, ಕಟೀಲು ದುರ್ಗಾಪರಮೇಶ್ವರಿ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ ೨.೫ ಲಕ್ಷ ಹಣವನ್ನು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಂಡಿದ್ದಾರೆ. ಚುನಾವಣಾ ನೀತಿಸಂಹಿತೆ ಪ್ರಕಾರ ೫೦ ಸಾವಿರಕ್ಕಿಂತ ಹೆಚ್ಚು ಹಣವನ್ನು ತೆಗೆದುಕೊಂಡು ಹೋಗುವಂತಿಲ್ಲ. ಹಾಗಾಗಿ, ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪಾವಘಡ ವೈದ್ಯರೊಬ್ಬರು ಕುಟುಂಬ ಸಮೇತ ಕಾರಿನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅವರ ಕಾರಿನಲ್ಲಿ ಈ ಹಣ ಪತ್ತೆಯಾಗಿತ್ತು.ಅದೇ ರೀತಿ ಮೊನ್ನೆ ಗುರುವಾರ ಸಹ ಇದೇ ಕೊಟ್ಟಿಗೆಹಾರ ಬಳಿ ಧರ್ಮಸ್ಥಳ ದರ್ಶನ ಪಡೆದು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಹೋಗುತ್ತಿದ್ದ ರಾಮನಗರ ಮೂಲದ ಭಕ್ತಾದಿಯೊಬ್ಬರಿಂದಲೂ ೧ ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.ನೀತಿಸಂಹಿತೆ ಜಾರಿಯಾದ ನಂತರ ಕಳೆದ ೨ ದಿನಗಳಲ್ಲಿ ವಿವಿಧೆಡೆ ಅಪಾರ ನಗದು, ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶಿವಮೊಗ್ಗದಲ್ಲಿ ೧.೪೦ ಕೋಟಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೆಯೇ, ತರೀಕೆರೆಯಲ್ಲೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೬ ಕೋಟಿ ೪೪ ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿವಮೊಗ್ಗದಿಂದ ರಂಗೇನಹಳ್ಳಿಗೆ ತೆರಳುತ್ತಿದ್ದ ಕಾರನ್ನು ಎಂಎನ್ ಕ್ಯಾಂಪ್ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೊಳಪಡಿಸಿದಾಗ ದಾಖಲೆಗಳಿಲ್ಲದ ೩೦ ಲಕ್ಷ ರೂ.ಗಳು ಪತ್ತೆಯಾಗಿದ್ದು, ಇದನ್ನೂ ವಶಪಡಿಸಿಕೊಳ್ಳಲಾಗಿದೆ.
ರಾಮನಗರ ಜಿಲ್ಲೆಯ ಗಡಿಭಾಗ ಕೋಲೂರು ಗ್ರಾಮದ ಬಳಿ ಪೊಲೀಸರು ಕ್ಯಾಂmರ್‌ವೊಂದನ್ನು ತಡೆದು ನಿಲ್ಲಿಸಿ ಅಕ್ರಮವಾಗಿ ಸಾಗಿಸುತ್ತಿದ್ದ. ೩೦ ಟನ್ ಅಕ್ಕಿ ಮತ್ತು ೧.೪೧ ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.ಚೆನ್ನಪಟ್ಟಣದ ವಿವಿಧೆಡೆ ಪೊಲೀಸರು ದಾಳಿ ಮಾಡಿ ೫೫ ಲೀ. ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು ಎಂದು ಹೇಳಲಾಗಿದೆ.