ಅಪಾರ್ಟ್‌ಮೆಂಟ್ ಅಗ್ನಿ ದುರಂತ ಸುತ್ತ ಅನುಮಾನದ ಹುತ್ತ

ಬೆಂಗಳೂರು,ಸೆ.೨೨- ದೇವರಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್‌ಮೆಂಟ್ ಅಗ್ನಿ ಅವಘಡಕ್ಕೆ ಕಾರಣ ನಿಗೂಢವಾಗಿದ್ದು, ತಾಯಿ-ಮಗಳದ್ದು ಅಸಹಜ ಸಾವು ಎಂದು ಬೇಗೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್ ಎಸ್ ಎಲ್) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಎಲೆಕ್ಟ್ರಿಕಲ್ ಎಂಜಿನಿಯರ್ ತಂಡವು ಬೆಂಕಿಯ ಕಾರಣ ತಿಳಿಯಲು ತಂಡ ಪರಿಶೀಲನೆ ನಡೆಸಲಿದೆ. ಮತ್ತೊಂದೆಡೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಕೂಡ ಬೆಂಕಿ ಅವಘಡದ ಬಗ್ಗೆ ತನಿಖೆ ನಡೆಸಲಿದ್ದಾರೆ.
ನಿಯಮಗಳ ನಿರ್ಲಕ್ಷ್ಯ:
ಅಗ್ನಿ ದುರಂತಕ್ಕೆ ಬಿಬಿಎಂಪಿ, ಅಪಾರ್ಟ್‌ಮೆಂಟ್ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಅಪಾರ್ಟ್ ಮೆಂಟ್‌ನಲ್ಲಿ ಅಗ್ನಿ ಆಕಸ್ಮಿಕ ತಡೆಯುವ ನಿಯಮಗಳ ಪಾಲನೆಯಾಗಿಲ್ಲ. ಹೀಗಾಗಿ ಈ ಇಬ್ಬರ ನಿರ್ಲಕ್ಷ್ಯದಿಂದ ಎರಡು ಜೀವಗಳು ಸಜೀವ ದಹನವಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಪಾರ್ಟ್ ಮೆಂಟ್‌ನಲ್ಲಿ ಜನರನ್ನು ಎಚ್ಚರಿಸುವ ಸೈರನ್ ವ್ಯವಸ್ಥೆ ಇಲ್ಲ. ಬೆಂಕಿ, ಹೊಗೆ ನಂದಿಸಲು ವಾಟರ್ ಲೈನ್ ವ್ಯವಸ್ಥೆ ಇಲ್ಲ. ಪ್ರತಿ ಅಂತಸ್ತಿನಲ್ಲಿ ರಾಸಾಯನಿಕ ಮಿಶ್ರಿತ ಬೆಂಕಿ ನಂದಿಸುವ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇಲ್ಲ. ಅಪಾರ್ಟ್‌ಮೆಂಟ್ ಅಕ್ಕಪಕ್ಕ ಟ್ರಾನ್ಸ್ ಫಾರ್ಮರ್ ಇರಬಾರದು. ಆದರೆ ಅಪಾರ್ಟ್‌ಮೆಂಟ್ ಕಾಂಪೌಂಡ್ ಒಳಗೇ ಟ್ರಾನ್ಸ್ ಫಾರ್ಮರ್ ಇದ್ದು ಇದ್ಯಾವುದನ್ನೂ ಬಿಬಿಎಂಪಿ ಪರಿಶೀಲನೆ ಮಾಡಿಯೇ ಇಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಸಿಲಿಂಡರ್ ಸೇಫ್ :
ಮನೆಯಲ್ಲಿದ್ದ ಎರಡೂ ಸಿಲಿಂಡರ್ ಕೂಡ ಸೇಫ್ ಆಗಿವೆ. ಹೀಗಾಗಿ ಎಲೆಕ್ಟ್ರಾನಿಕ್ ವಸ್ತುಗಳಿಂದ ಸ್ಫೋಟ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ತನಿಖೆ ವೇಳೆ ಗ್ಯಾಸ್‌ನಿಂದ ಬೆಂಕಿ ಹೊತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಯುಪಿಎಸ್, ಮೊಬೈಲ್ ಚಾರ್ಜಿಂಗ್, ದೇವರ ಮನೆಯ ದೀಪದ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ.
ಆಶ್ರಿತ್ ಅಪಾರ್ಟ್‌ಮೆಂಟ್ ನಲ್ಲಿ ಭೀಮಸೇನ್ ಅವರು ಪ್ಲ್ಯಾಟ್ ಅನ್ನು ೨೦೧೮ರಲ್ಲಿ ಖರೀದಿಸಿದ್ದು ಬೆಂಕಿ ಬಿದ್ದ ಬಳಿಕ ಪತಿ ಭೀಮಸೇನ್‌ರಿಗೆ ಪತ್ನಿ ಭಾಗ್ಯ ರೇಖಾ ಕರೆ ಮಾಡಿದ್ದಾರೆ. ಒಳಗೆ ಬೆಂಕಿ ಬಿದ್ದಿದೆ ಬೇಗ ಬನ್ನಿ ಎಂದು ಕೂಗಿಕೊಂಡಿದ್ದಾರೆ.
ಭೀಮಸೇನ್ ಬರುವ ಮೊದಲೇ ಆಗ್ನಿ ವ್ಯಾಪಿಸಿ ಆಗ್ನಿ ಶಾಮಕ ದಳ ಕಾರ್ಯಾಚರಣೆ ನಡೆಸುವಷ್ಟರಲ್ಲಿ ತಾಯಿ-ಮಗಳು ಇಬ್ಬರು ಸಜೀವ ದಹನವಾಗಿದ್ದಾರೆ.
ಮೃತದೇಹ ಹಸ್ತಾಂತರ:
ಮೃತ ತಾಯಿ-ಮಗಳ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ನೆರವೇರಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಈ ನಡುವೆ ಅಗ್ನಿ ದುರಂತದ ಮನೆ ಮಾಲೀಕ ಬೇಗೂರು ಪೊಲೀಸರಿಗೆ ನಿನ್ನೆ ರಾತ್ರಿಯೇ ದೂರು ದಾಖಲಿಸಿದ್ದಾರೆ.
ಮನೆ ಮಾಲೀಕ ಭೀಮಸೇನ್ ರಾವ್ ಹಾಗೂ ಅಳಿಯ ಸಂದೀಪ್ ದೂರು ನೀಡಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಜೊತೆಗೆ ಪತ್ನಿ ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕಠಿಣ ಕ್ರಮ ಕೈಗೊಳ್ಳಿ:
ಬೆಂಕಿಗೆ ಕಾರಣ ಹುಡುಕಿ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ನೀಡಿರುವ ದೂರಿನ ಅನ್ವಯ ಅಗ್ನಿ ಅಪಘಾತ ಹಾಗೂ ಅಸಹಜ ಸಾವು ಎಂದು ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.
ಘಟನೆ ಬಗ್ಗೆ ಆಶ್ರಿತ್ ಆಸ್ಪೈರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಎಷ್ಟೇ ಒದ್ದಾಡಿದರೂ ಕೂಡ ಇಬ್ಬರನ್ನು ಉಳಿಸಲು ಸಾಧ್ಯವಾಗಿಲ್ಲ. ಮನೆಯಲ್ಲಿ ನಾಲ್ವರು ವಾಸವಿದ್ದರು. ಮೊಮ್ಮಗನನ್ನು ನಾವೇ ಹೊರಗಡೆ ಕರೆದುಕೊಂಡು ಬಂದೆವು. ಕೆಲಸಕ್ಕೆ ಹೋಗಿದ್ದ ಮನೆಯ ಯಜಮಾನ ನಂತರ ಬಂದಿದ್ದಾರೆ. ಮನೆಯಲ್ಲಿ ಅಜ್ಜಿ, ಮಹಿಳೆ, ಮಗು ಮನೆಯಲ್ಲಿ ಇದ್ದರು ಎಂದು ಹೇಳಿದ್ದಾರೆ.
ಪ್ಲ್ಯಾಟ್ ಗಳಿಗೆ ಹಾನಿ:
ಈ ಸಂಬಂಧ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ರಾಮಕೃಷ್ಣ ಪ್ರತಿಕ್ರಿಯಿಸಿ, ಘಟನೆಯಿಂದ ೨ ಪ್ಲ್ಯಾಟ್ ಗಳಿಗೆ ತುಂಬಾ ಹಾನಿಯಾಗಿದೆ. ಮನೆಯಲ್ಲಿದ್ದ ೨ ಸಿಲಿಂಡರ್ ಗಳಿಗೆ ಯಾವುದೇ ಹಾನಿಯಾಗಿಲ್ಲ. ಬೆಂಕಿ ಯಾವ ರೀತಿ ಹೊತ್ತಿಕೊಂಡಿದೆ ಎನ್ನುವುದು ಬೆಳಕಿಗೆ ಬರಬೇಕಿದೆ. ಅಪಾರ್ಟ್‌ಮೆಂಟ್ ನಲ್ಲಿ ೭೨ ಫ್ಲ್ಯಾಟ್ ಇದೆ ಎಂದು ತಿಳಿಸಿದ್ದಾರೆ.

ಅಳಿಯನ ಕಣ್ಣೀರು
ಮನೆಯ ಹಾಲ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬೇಗ ಬಾರಪ್ಪ ಎಂದು ಕರೆದರಾದರೂ ಅವರನ್ನು ನನಗೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಅಗ್ನಿ ಅವಘಡದಲ್ಲಿ ಸಜೀವ ದಹನವಾಗಿರುವ ಭಾಗ್ಯ ರೇಖಾ ಅವರ ಅಳಿಯ ಸಂದೀಪ್ ಕಣ್ಣೀರು ಹಾಕಿದ್ದಾರೆ.
ಹಾಲ್‌ನಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ನನಗೆ ಫೋನ್ ಮಾಡಿ, ಹಾಲ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಎಂದು ಅತ್ತೆ ಕರೆ ಮಾಡಿದ ಕೂಡಲೇ ನಾನು ಓಡಿ ಹೋಗಿ ಬಾಗಿಲು ತೆರೆದ ತಕ್ಷಣ ನಮ್ಮ ಮೇಲೂ ಬೆಂಕಿ ಬಂತು ಎಂದರು.
ಕಚೇರಿ ಪಕ್ಕದಲ್ಲೇ ನಮ್ಮ ಫ್ಲ್ಯಾಟ್ ಇದ್ದು, ದುರಂತದ ವೇಳೆ ನಾನು ಕೂಡ ಫ್ಲ್ಯಾಟ್ ನಲ್ಲೇ ಇದ್ದೆ ಎಂದು ತಿಳಿಸಿದ್ದಾರೆ.
ಬೆಂಕಿ ಅವಘಡದ ಸಂಬಂಧ ಆಗ್ನೇಯ ವಲಯ ಡಿಸಿಪಿ ಶ್ರೀನಾಥ್ ಜೋಶಿ ಮಾತನಾಡಿ, ಅಪಾರ್ಟ್ ಮೆಂಟ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಸ್ಫೋಟ ಕಾರಣವಲ್ಲ. ಯಾವುದೋ ವಸ್ತುವಿನಿಂದ ಮೊದಲು ಬೆಂಕಿ ಹೊತ್ತಿಕೊಂಡಿರಬಹುದು. ನಂತರ ಮನೆಯಲ್ಲಿ ಉಳಿದ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಬೆಂಕಿ ಹಬ್ಬಿ ಮನೆಯ ಎಲ್ಲಾ ಕಡೆ ಬೆಂಕಿ ಹಬ್ಬಿದೆ ಎಂದು ತಿಳಿಸಿದ್ದಾರೆ.