ಅಪಾಯದ ಅಂಚಿನಲ್ಲಿರುವ ಉಪನೊಂದಣಾಧಿಕಾರಿ ಕಛೇರಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.20: ಪಟ್ಟಣದ ಉಪ ನೊಂದಣಾಧಿಕಾರಿಗಳ ಕಛೇರಿಗೆ ಸೇರಿದ ರೆಕಾರ್ಡ್ ರೂಂ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು ತಾಲೂಕಿನ ಲಕ್ಷಾಂತರ ರೈತರಿಗೆ ಸಂಬಂಧಿಸಿದ ಭೂ ದಾಖಲೆಗಳು ಅಪಾಯಕ್ಕೆ ಸಿಲುಕಿವೆ.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಉಪ ನೊಂದಣಾಧಿಕಾರಿಗಳ ಕಛೇರಿಯಿದೆ. ನಿತ್ಯ ನೂರಾರು ರೈತರು ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿ ನೋಂದಣಿ ಪ್ರಕ್ರಿಯೆ ಇದೇ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ನಡೆಯುತ್ತಿದೆ. ಉಪ ನೋಂದಣಾಧಿಕಾರಿಗಳ ಹಳೆಯ ಕಛೇರಿ ಶಿಥಿಲಾವಸ್ಥೆಗೆ ತಲುಪಿದ ಕಾರಣ ಉಪ ನೊಂದಣಾಧಿಕಾರಿಗಳ ಕಛೇರಿಯನ್ನು ತಾತ್ಕಾಲಿಕವಾಗಿ ಹಳೆಯ ತಾಲೂಕು ಕಛೇರಿಗೆ ಸ್ಥಳಾಂತರಿಸಲಾಗಿದೆ. ಪಟ್ಟಣದಲ್ಲಿ ಮಿನಿವಿಧಾನಸೌಧವನ್ನು ನಿರ್ಮಿಸಿದ ಅನಂತರ ತೆರವಾದ ಹಳೆಯ ತಾಲೂಕು ಕಛೇರಿಗೆ ಉಪ ನೊಂದಣಾಧಿಕಾರಿಗಳ ಕಛೇರಿಯನ್ನು ಸ್ಥಳಾಂತರಿಸಲಾಗಿದ್ದರೂ ನೊಂದಣಿಯಾದ ಆಸ್ತಿ ಪಾಸ್ತಿಯ ದಾಖಲೆಗಳು ಮಾತ್ರ ಹಳೆಯ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿಯೇ ಉಳಿದಿದ್ದು ಅವುಗಳಿಗೆ ಸೂಕ್ತ ರಕ್ಷಣೆಯ ಕೊರತೆ ಎದುರಾಗಿದೆ. ಹಳೆಯ ಉಪ ನೊಂದಣಾಧಿಕಾರಿಗಳ ಕಛೇರಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಹೆಂಚಿನ ತೊಲೆ ಮತ್ತು ರಿಪೀಸ್ ಪಟ್ಟಿಯ ಮರಗಳು ಗೆದ್ದಲು ಹಿಡಿದಿವೆ. ಕಟ್ಟಡದ ಸುತ್ತ ಗಿಡಗೆಂಟೆಗಳು ಬೆಳೆದು ನಿಂತಿವೆ. ಮಳೆ ಬಂದರೆ ಕಟ್ಟಡದೊಳಗೆ ನೀರು ಸೋರಿಕೆಯಾಗುತ್ತಿದೆ. ಸಾರ್ವಜನಿಕರ ದಾಖಲೆಗಳ ಸಂರಕ್ಷಣೆ ಉಪ ನೊಂದಣಾಧಿಕಾರಿಗಳಿಗೆ ಬಹು ದೊಡ್ಡ ಸವಾಲಾಗಿದೆ.
ಜಾಗದ ಸಮಸ್ಯೆ: ಪಟ್ಟಣದ ಹಳೆಯ ತಾಲೂಕು ಕಛೇರಿಯನ್ನು ಮೈಸೂರು ಮಹಾರಾಜರ ಆಳ್ವಿಕೆಯ ಸಂದರ್ಭದಲ್ಲಿ (1895) ನಿರ್ಮಿಸಲಾಗಿದೆ. ತಾಲೂಕು ಕಛೇರಿಯ ಮುಂದಿನ ಜಾಗಕ್ಕೆ ಹೊಂದಿಕೊಂಡಂತೆ ನಂತರದ ಕಾಲಘಟ್ಟದಲ್ಲಿ ಉಪ ನೊಂದಣಾಧಿಕಾರಿಗಳ ಕಾರ್ಯಾಲಯವನ್ನು ಮಂಗಳೂರು ಹೆಂಚು ಹಾಗೂ ಮದ್ರಾಸ್ ಆರ್.ಸಿ.ಸಿ ಬಳಸಿ ನಿರ್ಮಿಸಲಾಗಿದೆ. ಕಟ್ಟಡ ಶಿಥಿಲವಾದ ಕಾರಣದಿಂದ ಕಛೇರಿಯನ್ನು ಹಳೆಯ ತಾಲೂಕು ಕಛೇರಿಗೆ ವರ್ಗಾಯಿಸಲಾಗಿದೆ. ಇದೇ ಜಾಗದಲ್ಲಿ ನೂತನ ಉಪ ನೊಂದಣಾಧಿಕಾರಿಗಳ ಕಛೇರಿಯ ನೂತನ ಕಟ್ಟಡ ನಿರ್ಮಿಸಲು ರಾಜ್ಯ ನೊಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು 18-03-2019 ರಲ್ಲಿಯೇ 1,27,30,000 ಮೊತ್ತದ ಹಣವನ್ನು ಆಡಳಿತಾತ್ಮಕ ಮಂಜೂರಾತಿ ಪಡೆದು ಅನುಮೋದಿಸಿದ್ದಾರೆ. ಈ ಕುರಿತು ರಾಜ್ಯ ಮುದ್ರಾಂಕ ಇಲಾಖೆ ಇಲ್ಲಿನ ತಹಸೀಲ್ದಾರರಿಗೂ ಲಿಖಿತ ಪತ್ರ ಬರೆದಿದೆ. ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ತಾಲೂಕು ಕಛೇರಿಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ ಸಹಕರಿಸುತ್ತಿಲ್ಲ. ಇದು ಪಾರಂಪರಿಕ ಕಟ್ಟಡವಲ್ಲದಿದ್ದರೂ ಹಳೆಯ ತಾಲೂಕು ಕಛೇರಿ ಆವರಣದಲ್ಲಿರುವ ಕಾರಣದಿಂದ ಈ ಕಟ್ಟಡಕ್ಕೂ ಪಾರಂಪರಿಕ ಕಟ್ಟಡದ ಹಣೆಪಟ್ಟಿ ಕಟ್ಟಲಾಗಿದೆ. ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಶಿಥಿಲವಾಗಿರುವ ಹಳೆಯ ಕಟ್ಟಡವನ್ನು ಕೆಡವಿ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು ಜಿಲ್ಲಾ ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆಯನ್ನು ಪಡೆಯುವಂತೆ ಸೂಚಿಸಿದೆ. ಸಾರ್ವಜನಿಕರ ಆಸ್ತಿ ಪತ್ರಗಳ ಸಂರಕ್ಷಣೆಯ ದೃಷ್ಠಿಯಿಂದ ಉಪ ನೊಂದಣಾಧಿಕಾರಿಗಳ ನೂತನ ಕಟ್ಟಡವನ್ನು ನಿರ್ಮಿಸಲೇಬೇಕಾಗಿದೆ. ಆದರೆ ತಾಲೂಕು ಕಛೇರಿಯ ಆವರಣದಲ್ಲಿ ನೂತನ ಉಪ ನೊಂದಣಾಧಿಕಾರಿಗಳ ಕಛೇರಿ ನಿರ್ಮಿಸಲು ಅಥವಾ ಹಳೆಯ ಶಿಥಿಲವಾಗಿರುವ ಕಟ್ಟಡವನ್ನು ಕೆಡವಲು ಜಿಲ್ಲಾಧಿಕಾರಿಗಳಾಗಲೀ ಅಥವಾ ತಹಸೀಲ್ದಾರರಾಗಲೀ ಮುದ್ರಾಂಕ ಇಲಾಖೆಗೆ ಅಗತ್ಯ ಸಹಕಾರ ನೀಡುತ್ತಿಲ್ಲ. ಹಳೆಯ ಶಿಥಿಲ ಕಟ್ಟಡದಲ್ಲಿರುವ ನೂರಾರು ವರ್ಷಗಳ ಹಳೆಯ ಆಸ್ತಿ ದಾಖಲಾತಿಗಳು ಹಾಳಾಗುವ ಅಪಾಯಕ್ಕೆ ಸಿಲುಕಿದ್ದರೂ ಸ್ಥಳೀಯವಾಗಿ ಯಾವುದೇ ಜನಪ್ರತಿನಿಧಿಗಳು ತಲೆಕಡೆಸಿಕೊಳ್ಳುತ್ತಿಲ್ಲ.
ರೈತಸಂಘ ಒತ್ತಾಯ: ಶಿಥಿಲವಾದ ಹಳೆಯ ಕಟ್ಟಡದಲ್ಲಿರುವ ಉಪ ನೊಂದಣಾಧಿಕಾರಿಗಳ ಎಲ್ಲಾ ಆಸ್ತಿ ದಾಖಲಾತಿಗಳಿಗೆ ಕ್ರಮ ವಹಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ. ಒಟ್ಟಣದ ಉಪ ನೊಂದಣಾಧಿಕಾರಿಗಳ ಕಛೇರಿಗೆ ಆಗಮಿಸಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೂತನ ಕಟ್ಟಡ ನಿರ್ಮಾಣವಾಗುವವರೆಗೆ ತಾಲೂಕು ಆಡಳಿತ ಸೌಧದ ಕಛೇರಿಯ ಒಳಗೆ ಯಾವುದಾರೊಂದು ಸುಸಜ್ಜಿತ ಕೊಠಡಿ ಪಡೆದು ದಾಖಲೆಗಳ ಸಂರಕ್ಷಣೆಗೆ ಕ್ರಮ ವಹಿಸುವಂತೆ ಉಪ ನೊಂದಣಾಧಿಕಾರಿ ಡಿ.ಎಸ್.ಮಧುಸೂದನ್ ಅವರನ್ನು ಒತ್ತಾಯಿಸಿದರು.
ಈಗಾಗಲೇ ರೈತರು ತಮ್ಮ ತಮ್ಮ ಭೂದಾಖಲೆಗಳನ್ನು ಪಡೆಯಲು ನಿತ್ಯ ತಾಲೂಕು ಕಛೇರಿಗೆ ಅಲೆಯುತ್ತಿದ್ದಾರೆ. ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿರುವ ನೂರಾರು ವರ್ಷಗಳ ಹಳೆಯ ದಾಖಲೆಗಳು ನಾಶವಾದರೆ ಇದಕ್ಕೆ ಯಾರು ಹೊಣೆ?. ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ತಹಸೀಲ್ದಾರರ ನಿವೇಶನ ಪಾಳು ಬಿದ್ದಿದೆ. ಸದರಿ ಜಾಗದಲ್ಲಿ ಹಲವರು ಈಗಾಗಲೇ ಹುಲ್ಲಿನ ಮೆದೆ ಹಾಕಿಕೊಂಡು ಹಸು ಸಾಕಣಿಕೆ ಮುಂತಾದವುಗಳನ್ನು ಮಾಡುತ್ತಿದ್ದಾರೆ. ಕಣ್ಣಮುಂದೆಯೇ ಕೋಟ್ಯಂತರ ರೂ ಬೆಲೆ ಬಾಳುವ ತಹಸೀಲ್ದಾರರ ನಿವೇಶನ ಅನ್ಯಾಕ್ರಮಣವಾಗಿದ್ದರೂ ಅದರ ಸಂರಕ್ಷಣೆಗೆ ಮುಂದಾಗದ ತಹಸೀಲ್ದಾರರು ತಾಲೂಕು ಕಛೇರಿಯ ಆವರಣದಲ್ಲಿ ಉಪ ನೊಂದಣಾಧಿಕಾರಿಗಳ ಕಛೇರಿ ನಿರ್ಮಾಣಕ್ಕೆ ಸಹಕರಿಸುತ್ತಿಲ್ಲ. ತಾಲೂಕು ಕಛೇರಿಯ ಆವರಣದಲ್ಲಿ ಕಂದಾಯ ಇಲಾಖೆಗೆ ಸೂಕ್ತ ಜಾಗ ನೀಡುವ ಮನಸ್ಸು ಇಲ್ಲದಿದ್ದರೆ ನಾಗಮಂಗಲ ರಸ್ತೆಯಲ್ಲಿ ಅನ್ಯಾಕ್ರಮಣವಾಗಿರುವ ತಹಸೀಲ್ದಾರರ ವಸತಿ ನಿವೇಶನದ ಜಾಗವನ್ನು ಉಪ ನೊಂದಣಾಧಿಕಾರಿಗಳ ಕಛೇರಿ ನಿರ್ಮಾಣಕ್ಕೆ ಹಸ್ತಾಂತರಿಸಲಿ. ಸರ್ಕಾರಿ ಜಾಗದಲ್ಲಿ ಮತ್ತೊಂದು ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ತಹಸೀಲ್ದಾರರು ಅಸಹಕಾರ ನೀಡುತ್ತಿರುವುದು ಖಂಡನಾರ್ಹ. ಈ ಬಗ್ಗೆ ಕ್ಷೇತ್ರದ ಶಾಸಕರು ತುರ್ತು ಗಮನ ಹರಿಸಬೇಕು. ಇಲ್ಲದಿದ್ದರೆ ರೈತರ ಆಸ್ತಿ ಪತ್ರಗಳ ಸಂರಕ್ಷಣೆಗೆ ಒತ್ತಾಯಿಸಿ ರಾಜ್ಯ ರೈತಸಂಘ ಹೋರಾಟಕ್ಕಿಳಿಯಲಿದೆ ಎಂದು ಕಾರಿಗನಹಳ್ಳಿ ಪುಟ್ಟೇಗೌಡ ಎಚ್ಚರಿಸಿದರು.