ಕೋಲಾರ,ಸೆ.೨೬- ಯುವಜನ ಪ್ರಶ್ನಿಸಿದರೆ ಇಡೀ ದೇಶವೇ ಕೇಳಿಸಿಕೊಳ್ಳುತ್ತದೆ ಎಂಬುದನ್ನು ನೆನಪಿಡಿ. ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳಬೇಡಿ ಎಂದು ಸಂಸ್ಕೃತಿ ಚಿಂತಕ, ಬುಡ್ಡಿದೀಪ ಪಾಠಶಾಲೆ ಸಂಸ್ಥಾಪಕರು, ಸಾಮಾಜಿಕ ಚಳವಳಿಗಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಸಂವಾದ ಯುವ ಸಂಪನ್ಮೂಲ ಕೇಂದ್ರ ಕೋಲಾರ, ಕರ್ನಾಟಕ ಯುವ ಮುನ್ನಡೆ, ಕೋಲಾರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರ ಸಹಯೋಗದಲ್ಲಿ ಕಾಲೇಜಿನಲ್ಲಿ ಸೋಮವಾರ ನಡೆದ ಸಂವಾದ ಸುಗ್ಗಿ ಸಂಭ್ರಮದಲ್ಲಿ ಕರ್ನಾಟಕ ಯುವಮುನ್ನಡೆ ಲೀಡರ್ಸ್‌ಗಳ ಸತ್ಯಶೋಧನಾ ವರದಿಗಳನ್ನು ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಾರತ ಸಂವಿಧಾನ ರಚನೆಯಲ್ಲಿ ದೊಡ್ಡ ಶ್ರಮವಿದೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೀರ್ಘಕಾಲ ಚರ್ಚೆ ನಡೆಸಲಾಗಿತ್ತು. ಆದರೆ, ಇದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ. ಸಂವಿಧಾನದ ಮೂಲ ಆಶಯಗಳು ಮಾಯವಾಗುತ್ತಿವೆ. ಸಂವಿಧಾನದ ಜೀವಹರಣ ಮಾಡಲಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಂಬುವುದು ಒಂದಕ್ಕೊಂದು ಪೂರಕವಾಗಿದ್ದು, ಈ ಮೂರೂ ಅಂಶಗಳನ್ನು ದೇಶ ಕಡೆಗಣಿಸಿದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ದೇಶದ ಪ್ರಧಾನಿ ಪತ್ರಿಕಾಗೋಷ್ಠಿಯನ್ನು ಮಾಡುವ ಸನ್ನಡತೆಯನ್ನೂ ತೋರದಿರುವುದು ಪ್ರಜಾಪ್ರಭುತ್ವಕ್ಕಾಗುತ್ತಿರುವ ಘೋರ ಅಪರಾಧ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ನಾವು ವಾಸಿಸುವ ಸ್ಥಳಗಳು ಇಂದಿಗೂ ತಾರತಮ್ಯಗಳಿಂದ ಕೂಡಿವೆ. ನಾವೆಲ್ಲ ಒಂದು ಎಂಬುದು ಬಾಯಲ್ಲಿ ಮಾತ್ರ ಉಳಿದಿದ್ದು, ಕೇರಿಗಳು ಒಂದಾಗಿಲ್ಲ. ದಲಿತರು ಇಂದಿಗೂ ಅಸ್ಪೃಶ್ಯತೆಯನ್ನು, ಮಹಿಳೆಯರು ದೌರ್ಜನ್ಯವನ್ನು, ಹತ್ಯಾಕಾಂಡಗಳನ್ನು ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಡಾಮಿನಿಕ್ ಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಜಿ.ಅರಿವು ಶಿವಪ್ಪ, ಗಮನ ಮಹಿಳಾ ಸಮೂಹದ ಶಾಂತಮ್ಮ, ಸಂವಾದ ಬೆಂಗಳೂರು ವೈಆರ್‌ಸಿಯ ಜ್ಯೋತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಡಾ. ಮುರಳೀಧರ ಅವರು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿದ್ದರು.
ಕೋಲಾರ್ ವೈಆರ್ಸಿಯ ಮೆಂಟರ್‌ಗಳಾದ ಮಂಜುನಾಥ್ ಜಿ.ಕೆ, ವಿಜಯ ಕುಮಾರ್ ಎಸ್, ಸಬೀನಾ ಎ, ಈ ನೆಲ ಈ ಜಲ ಸಾಂಸ್ಕೃತಿಕ ತಂಡದ ವೆಂಕಟಾಚಲಪತಿ, ಯಂಗ್ ಇಂಡಿಯಾ ಡೆವೆಲಪ್ಮೆಂಟ್ ಸೊಸೈಟಿಯ ಸಂಸ್ಥಾಪಕ ಸದಸ್ಯರಾದ ಹೂವಳ್ಳಿ ನಾಗರಾಜು ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.