ಅಪಾಯದಲ್ಲಿ ತೆಕ್ಕಲಕೋಟೆಯ ಕೋಟೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಅ.13: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಇತಿಹಾಸ ಪ್ರಸಿದ್ದಿಯಾಗಿರುವ ಐತಿಹಾಸಿಕ ಕೋಟೆ ಅಪಾಯದ ಅಂಚಿನಲ್ಲಿದ್ದು, ಕೋಟೆಯ ಪಶ್ಚಿಮ ಭಾಗದ ಗೋಡೆ ಕುಸಿದಿದ್ದು ಕಲ್ಲುಗಳು ಉರುಳಿದ್ದು, ಕೋಟೆಯ ನಾಲ್ಕು ಬುರುಜುಗಳ ಗೋಡೆಗಳ ಮೇಲೆ ಎಲ್ಲಾ ತುಂಬಾ ಬೇಲಿ ಬೆಳೆದು ನಿಂತಿದ್ದು ಕೋಟೆಯ ಬುರುಜುಗಳು ಕುಸಿಯುವ ಭೀತಿಯಲ್ಲಿವೆ. ಸ್ಥಳೀಯ ಆಡಳಿತಕ್ಕೆ ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸಹ ಕೋಟೆಯು ಪುರಾತತ್ವ ಇಲಾಖೆಯ ಆಧೀನದಲ್ಲಿ ಬರುತ್ತದೆ ಅದ್ದರಿಂದ ಯಾವುದೇ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ಹೇಳಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ.
ಕೋಟೆಯ ಒಳಭಾಗದಲ್ಲಿ ನಾಲ್ಕು ಸರ್ಕಾರಿ ಬಾಲಕಿಯರ ಶಾಲೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳು ಸದಾ ಭಯಭೀತರಾಗಿ ಶಾಲೆಗೆ ಬರುವಂತಾಗಿದೆ. ಈಗಲಾದರೂ ಸ್ಥಳೀಯ ಪಟ್ಟಣ ಪಂಚಾಯಿತಿ ಅಥವಾ ಸಂಬಂಧಿಸಿದ ಇಲಾಖೆಯವರಾಗಲಿ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳನ್ನು ಅಪಾಯದಿಂದ ಪಾರು ಮಾಡುವ ಹಾಗೂ ಐತಿಹಾಸಿಕ ಕೋಟೆ ರಕ್ಷಿಸುವ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ ಎಂದು ಸಿ.ಎಂ. ಮನೋಹರ, ಕಾಡಸಿದ್ದ, ಚಾಂದ್ ಭಾಷ, ಮಾರುತಿ, ಹುಸೇನಿ ಸ್ಥಳೀಯ ನಿವಾಸಿಗಳು ಹೇಳಿದರು.