ಅಪಾಯದಲ್ಲಿ ಒಕ್ಕೂಟ ವ್ಯವಸ್ಥೆ ಬಿಜೆಪಿ ತಿರಸ್ಕರಿಸಿ: ಪರಂ

ತುಮಕೂರು, ಮಾ. ೨೬- ಕೇಂದ್ರದಲ್ಲಿ ೧೦ ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎ ಸರ್ಕಾರದ ಜನ ವಿರೋಧಿ ಧೋರಣೆ ಮತ್ತು ನೀತಿಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ರಾಜ್ಯ ಮತ್ತು ದೇಶಾದ್ಯಂತ ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಮನವಿ ಮಾಡಿದರು.
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ದೆಹಲಿ ಹೋಗಿ ಪ್ರತಿಭಟನೆ ನಡೆಸಬೇಕಾಯಿತು. ಆದರೂ ಪ್ರಧಾನಮಂತ್ರಿಯಾಗಲೀ, ಕೇಂದ್ರ ಗೃಹ ಸಚಿವರಾಗಲೀ ಸಮಸ್ಯೆಗಳನ್ನು ಸರಿಪಡಿಸುವ ಭರವಸೆಯನ್ನು ನೀಡಲಿಲ್ಲ. ಇದನ್ನು ಗಮನಿಸಿದರೆ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ ಎಂಬುದು ಗೊತ್ತಾಗುತ್ತದೆ. ಹಾಗಾಗಿ ರಾಜ್ಯ ಮತ್ತು ದೇಶಾದ್ಯಂತ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.
ರಾಜ್ಯದಿಂದ ೨೬ ಮಂದಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದರೂ ಸಹ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಅನ್ಯಾಯ ಮಾಡಿದೆ. ಜಿಎಸ್‌ಟಿ ತೆರಿಗೆ ಪಾಲು, ಬರ ಪರಿಹಾರ ಬಿಡುಗಡೆ ಸೇರಿದಂತೆ ಎಲ್ಲ ವಿಚಾರದಲ್ಲೂ ನಮ್ಮ ರಾಜ್ಯವನ್ನು ಕಡೆಗಣಿಸುತ್ತಲೇ ಬರುತ್ತಿದೆ. ಆದರೂ ಯಾವೊಬ್ಬ ಬಿಜೆಪಿ ಸಂಸದರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಇತಿಹಾಸದಲ್ಲೇ ಕರ್ನಾಟಕಕ್ಕೆ ಇಷ್ಟೊಂದು ಬರಗಾಲ ಬಂದಿರಲಿಲ್ಲ. ಈ ಭೀಕರ ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ನಿಭಾಯಿಸುತ್ತಿದ್ದು, ರಾಜ್ಯದಲ್ಲಿ ಬರದಿಂದಾಗಿ ೩೬ ಸಾವಿರ ಕೋಟಿ ನಷ್ಟ ಉಂಟಾಗಿದ್ದರೂ ಸಹ ಕೇವಲ ೧೮ ಸಾವಿರ ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಯಿಂದಾಗಿ ರಾಜ್ಯದ ಜನತೆ ಸಂಕಷ್ಟ ಅನುಭವಿಸುವಂತಾಗಿದೆ. ಆದರೆ ರಾಜ್ಯ ಸರ್ಕಾರ ತನ್ನ ಹಣದಲ್ಲೇ ಪ್ರತಿಯೊಬ್ಬ ರೈತರಿಗೂ ೨ ಸಾವಿರ ರೂ. ಬರ ಪರಿಹಾರವನ್ನು ನೀಡಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಂಡಿದೆ ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಅನುದಾನವನ್ನು ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಲು ರಾಜ್ಯ ಕೃಷಿ ಸಚಿವರು ಸಮಯ ಕೇಳಿದರೂ ಇದುವರೆಗೂ ನೀಡಿಲ್ಲ. ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಭೇಟಿ ಮಾಡಲು ೭ ಬಾರಿ ಪತ್ರ ಬರೆದರೂ ಅವಕಾಶ ಮಾಡಿಕೊಲಿಲ್ಲ. ೮ನೇ ಬಾರಿಗೆ ಅವಕಾ ನೀಡಿದರು ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಅನುದಾನ ರಾಜ್ಯಕ್ಕೆ ಕೊಡಬೇಕಾಗಿರುವುದು ನಮ್ಮ ಹಕ್ಕು. ಈ ಹಣವನ್ನು ನೀಡದೆ ಸತಾಯಿಸುತ್ತಿರುವುದು ಕೇಂದ್ರ ಹಣಕಾಸು ಸಚಿವರಿಗೆ ನಾಚಿಕೆಯಾಗಬೇಕು. ಈ ವಿಚಾರದಲ್ಲಿ ಅತಿ ದೊಡ್ಡ ಸಳ್ಳನ್ನು ಅರ್ಥ ಸಚಿವರು ಹೇಳುತ್ತಿದ್ದಾರೆ. ಈ ಸಂಬಂಧ ಚರ್ಚೆಗೆ ಬರುವಂತೆ ರಾಜ್ಯದ ಕಂಚಾಯ ಸಚಿವರು ಸವಾಲು ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರಕ್ಕೆ ಕರ್ನಾಟಕದಲ್ಲಿ ೪.೫೦ ಲಕ್ಷ ಸಾವಿರ ಕೋಟಿ ಜಿಎಸ್‌ಟಿ ತೆರಿಗೆ ಹಣವನ್ನು ಸಂಗ್ರಹಿಸಿ ನೀಡಲಾಗುತ್ತಿದೆ. ದೇಶದಲ್ಲೇ ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೂ ನಮ್ಮ ಪಾಲಿನ ತೆರಿಗೆ ಹಣವನ್ನು ಸಮರ್ಪಕವಾಗಿ ಕೇಂದ್ರ ಸರ್ಕಾರ ನೀಡುತ್ತಿಲ್ಲ. ೨೦೨೧-೨೨ ರಲ್ಲಿ ಶೇ. ೩.೨ ರಷ್ಟು ಮಾತ್ರ ತೆರಿಗೆ ಪಾಲನ್ನು ನಮ್ಮ ರಾಜ್ಯ ಕೊಟ್ಟಿದೆ. ಇದರಿಂದ ಕೇಂದ್ರ ಮತ್ತು ರಾಜ್ಯದ ಸಂಬಂಧ ಹಾಳಾಗಿದೆ ಎಂದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಕೇಂದ್ರದ ಮಲತಾಯಿ ಧೋರಣೆ ಖಂಡನೀಯ. ಎನ್‌ಡಿಆರ್‌ಎಫ್ ಹಣ ಭಿಕ್ಷೆಯಲ್ಲ, ನಮ್ಮಗೂ ಅದರ ಮೇಲೆ ಹಕ್ಕಿದೆ. ಕೇಂದ್ರದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಗುಡುಗಿದರು.
ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಚುನಾವಣೆಯಲ್ಲಿ ತುಮಕೂರು ಸೇರಿದಂತೆ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಈ ಮೂಲಕ ಏಕೆ ಹೀಗೆ ಆಯಿತು ಎಂದು ಬಿಜೆಪಿ ನಾಯಕರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ, ಶಾಸಕ ಎಸ್.ಆರ್. ಶ್ರೀನಿವಾಸ್, ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್‌ಅಹಮದ್, ಗಂಗಹನುಮಯ್ಯ, ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮತ್ತಿತರರು ಉಪಸ್ಥಿತರಿದ್ದರು.

ಇಂಡಿಯಾ ಒಕ್ಕೂಟದ ಗ್ಯಾರಂಟಿಗಳು
ದೇಶದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಐಎನ್‌ಡಿಎ (ಇಂಡಿಯಾ) ಒಕ್ಕೂಟ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು. ರೈತರ ರಕ್ಷಣೆಯ ಕಾಯ್ದೆ ಹೊಸ ಕಾನೂನು, ಜಿಎಸ್‌ಟಿಯಿಂದ ಕೃಷಿ ಕ್ಷೇತ್ರ ಹೊರತುಪಡಿಸುವುದು. ಯುವಕರಿಗೆ ಅಪ್ರೆಂಟಿಸ್ ತರಬೇತಿ ಜತೆಗೆ ೧ ಲಕ್ಷ ರೂ. ನೀಡಲಾಗುವುದು, ಮಹಾಲಕ್ಷ್ಮಿ ಗ್ಯಾರಂಟಿ ಯೋಜನೆ ಜಾರಿಗೆ ತಂದು ೧ ಲಕ್ಷ ರೂ.ಗಳನ್ನು ಬಡ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಮಾಡುವುದು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.