ಅಪಾಯಕ್ಕೆ ಆಹ್ವಾನಿಸುವ ವಿದ್ಯುತ್ ಪರಿವರ್ತಕ !

ಜಗದೇವ ಎಸ್ ಕುಂಬಾರ
ಚಿತ್ತಾಪುರ:ಜ.23: ತಾಲೂಕಿನ ಕಮರವಾಡಿ ಗ್ರಾಮದ ಗ್ರಂಥಾಲಯಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಇರುವ ವಿದ್ಯುತ್ ಪರಿವರ್ತಕದಿಂದ ಅಪಾಯಕ್ಕೆ ಆಹ್ವಾನಿಸುವಂತಗಿದೆ.

ಈ ಓಣಿಯಲ್ಲಿ ವಾಸಿಸುವ ಜನ ಎದುರಿಸುತ್ತಿರುವ ಚಿತ್ರಣ ಇದಾಗಿದೆ. ಇಲ್ಲಿ ಅಳವಡಿಸಲಾದ ವಿದ್ಯುತ್ ಪರಿವರ್ತಕ(ಟಿಸಿ) ಬಲಿಗಾಗಿ ಕಾಯುವಂತಿದೆ. ಕೈಗೆ ತಾಗುವ ವಿದ್ಯುತ್ ಪರಿವರ್ತಕ, ವಿದ್ಯುತ್ ತಂತಿಯಿಂದ ಜೀವದ ಭಯ ನಿವಾಸಿಗಳಲ್ಲಿ ಆವರಿಸಿದೆ.

ಈ ಅಪಾಯಕರ ಟಿಸಿ ಪಕ್ಕದ ಮನೆಯವರು ಇದರ ಭೀತಿಯಿಂದ ದಿನಾಲೂ ಭಯದ ವಾತಾವರಣದಲ್ಲಿ ಜೀವನ ನಡೆಸುವಂತೆ ಆಗಿದೆ.ಅಲ್ಲದೆ ಪಕ್ಕದಲ್ಲಿ ಗ್ರಂಥಾಲಯ ಇರುವುದರಿಂದ ಗ್ರಂಥಾಲಯಕ್ಕೆ ಓದಲೂ ಹೋಗುವ ಯುವಕರು, ಪಾಲಕರು ಭಯ ಪಡುವಂತಾಗಿದೆ.

ವಿದ್ಯುತ್ ಪರಿವರ್ತಕ ಸ್ಥಳಾಂತರಕ್ಕಾಗಿ ನೆರವಾಗಲು ಗ್ರಾಪಂಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾದರೆ ಇಲ್ಲಿ ವಾಸಿಸುವ ಜನರ ಜೀವಕ್ಕೆ ಬೆಲೆಯೇ ಇಲ್ಲವೇ? ಇನ್ನೂಂದು ಕಡೆ ಜೆಸ್ಕಾಂ ಅಧಿಕಾರಿಗಳು ಸಹ ಇದನ್ನು ಕಂಡು ಕಾಣದಂತೆ ಹೋಗುತ್ತಾರೆ ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿಯ ಜನರ ಒತ್ತಾಯವಾಗಿದೆ.


ಓಣಿಯ ನಿವಾಸಿಗಳ ಸಮಸ್ಯೆಗೆ ಜೆಸ್ಕಾಂ ಅಧಿಕಾರಿಗಳು ಅಥವಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸಿ ಕೂಡಲೇ ಬಲಿಗಾಗಿ ಕಾಯುವಂತಿರುವ ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡಿ ಜನರಲ್ಲಿನ ಭಯದ ವಾತಾವರಣ ನಿವಾರಿಸಲು ಮುಂದಾಗಬೇಕು.

  • ಮಲ್ಲಿನಾಥ ಮಡಿವಾಳ
    ಸಮಾಜ ಸೇವಕರು ಕಮರವಾಡಿ.

ಇಲ್ಲಿಯ ಟಿಸಿ ಸ್ಥಳಾಂತರ ಮಾಡಬೇಕು. ಇಲ್ಲದಿದ್ದರೆ ನಮ್ಮವರು ಪರೇಶಾನ್ ಆಗಬೇಕಿದೆ. ಗ್ರಾಪಂ ಮತ್ತು ಜೆಸ್ಕಾಂನವರು ನಮ್ ಪ್ರಾಬ್ಲಮ್ ಅರ್ಥ ಮಾಡಿಕೊಂಡು ನಿರ್ಭಯದಿಂದ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು.

  • ಉಮಾದೇವಿ ಸ್ವಾಮಿ
    ಗ್ರಾಮದ ನಿವಾಸಿ ಕಮರವಾಡಿ