ಅಪಾಯಕಾರಿ ವೀಲಿಂಗ್ ನಾಲ್ವರು ಸೆರೆ

ಬೆಂಗಳೂರು,ಏ.೬- ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳಲ್ಲಿ ಅಪಾಯಕಾರಿ ವೀಲಿಂಗ್ ಮಾಡುತ್ತಿದ್ದ ನಾಲ್ವರು ಪುಂಡರನ್ನು ಕೆ ಆರ್ ಪುರಂ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ವೀಲಿಂಗ್ ಮಾಡುತ್ತಿದ್ದ ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದ ನಾಲ್ವರು ಆರೋಪಿಗಳಾದ ಯಾಸೀನ್ (೧೮), ಮುಬಾರಕ್ (೨೦), ಉಮರ್ (೧೮) ಹಾಗೂ ಧನುಷ್ ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಕಳೆದ ಏ.೧೪ ರಂದು ಬೆಳಗ್ಗೆ ಸುಮಾರು ೭ ರಿಂದ ೭:೧೫ರ ವೇಳೆ ಹೊಸಕೋಟೆ ಕಡೆಯಿಂದ ಎರಡು ಬೈಕ್‌ಗಳಲ್ಲಿ ವೀಲಿಂಗ್ ಮಾಡಿಕೊಂಡು ಬೇರೆ ವಾಹನದ ಸವಾರರಿಗೆ ತೊಂದರೆ ಕೊಡುತ್ತಿದ್ದರು. ಈ ವಾಹನ ಸವಾರರನ್ನು ಹಿಂಬಾಲಿಸಿ ವಾಹನ ಸವಾರರೊಬ್ಬರು ಕರ್ತವ್ಯನಿರತ ಜಂಕ್ಷನ್ ಜಾಕಿಗೆ ಮಾಹಿತಿ ನೀಡಿದ್ದರು.
ಈ ಸಂದರ್ಭದಲ್ಲಿ ಕೆಆರ್‌ಪುರಂ ಭಟ್ಟರಹಳ್ಳಿ ಸಿಗ್ನಲ್‌ನಲ್ಲಿ ಕರ್ತವ್ಯನಿರತ ಜಂಕ್ಷನ್ ಜಾಕಿ ಸೋಮಪ್ಪ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಪೊಲೀಸರನ್ನು ಕಂಡ ಬೈಕ್ ಸವಾರರು ತಮ್ಮ ಎರಡು ಬೈಕ್‌ಗಳನ್ನು ಸ್ಥಳ ದಲ್ಲಿಯೇ ಬಿಟ್ಟು ಪರಾರಿ ಯಾಗಿದ್ದರು.
ಸಂಚಾರ ಪೊಲೀಸರು ಈ ವಾಹನಗಳನ್ನು ವಶಕ್ಕೆ ಪಡೆದು ಕೆ.ಆರ್.ಪುರ ಸಂಚಾರ ಠಾಣೆಗೆ ಸ್ಥಳಾಂತರಿಸಿದರು. ಈ ವಾಹನಗಳಲ್ಲಿ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ. ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಇಂಜಿನ್ ಹಾಗೂ ಚಾಸಿ ನಂಬರ್ ಆಧಾರದಲ್ಲಿ ನಿನ್ನೆ ವಾಹನ ಮಾಲೀಕರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರು.
ಪತ್ತೆಯಾದ ನಂತರ ವಾಹನದ ಮಾಲೀಕರನ್ನು ಕರೆದು ವಿಚಾರಿಸಿದಾಗ ವೀಲಿಂಗ್ ಮಾಡುತ್ತಿದ್ದವರು ಸಿಕ್ಕಿಹಾಕಿಕೊಂಡಿದ್ದಾರೆ. ನಂತರ ವೀಲಿಂಗ್ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.