ಅಪಾಯಕಾರಿ ಬೈಕ್ ಚಾಲನೆ ಮಾಹಿತಿಗೆ ಕಮೀಷನರ್ ಮನವಿ

ಬೆಂಗಳೂರು,ಸೆ.೨೬-ರಸ್ತೆಗಳಲ್ಲಿ ಬೇಕಾಬಿಟ್ಟಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ಉಂಟುಮಾಡುವ ವಾಹನಗಳನ್ನು ಟೋಯಿಂಗ್ ಮಾಡಿ ದಂಡ ವಿಧಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದರು.
ಕೋರಮಂಗಲ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಗರದ ರಸ್ತೆಗಳ ಇಕ್ಕೆಲಗಳಲ್ಲಿ, ಕೆಲವು ರಸ್ತೆಗಳ ಪಾದಚಾರಿ ಮಾರ್ಗದಲ್ಲೂ ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡದೇ ಬೇರೆ ಮಾರ್ಗವಿಲ್ಲ ಎಂದರು.
ನಗರದ ರಸ್ತೆಗಳ ಇಕ್ಕೆಲಗಳಲ್ಲಿಯೇ ವಾಹನಗಳನ್ನು ನಿಲ್ಲಿಸಿ ಹೋಗಲಾಗುತ್ತಿದೆ. ಕೆಲವು ರಸ್ತೆಗಳ ಪಾದಚಾರಿ ಮಾರ್ಗದಲ್ಲೂ ವಾಹನಗಳನ್ನು ಅಡ್ಡದಿಡ್ಡಿ ನಿಲ್ಲಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಅಲ್ಲದೆ, ರಾತ್ರಿ ೧೧ ಗಂಟೆ ನಂತರ ಯುವಕರು ಹೆಚ್ಚಿನ ಶಬ್ಧ ಬರುವ ಹಾರನ್ ಹಾಗೂ ಸೈಲೆನ್ಸರ್ ಪೈಪ್ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರು ನೀಡಿದರು.
ಅದಕ್ಕೆ ಉತ್ತರಿಸಿದ ಆಯುಕ್ತರು, ಯಾವ ಪ್ರದೇಶದಲ್ಲಿ ಯುವಕರು ಆ ರೀತಿ ಬೈಕ್ ರೈಡಿಂಗ್ ಮಾಡುತ್ತಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಬಗ್ಗೆ ಸಮೀಪದ ಸಂಚಾರ ಠಾಣೆ ಅಥವಾ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದರೆ ಟೋಯಿಂಗ್ ಮೂಲಕ ವಾಹನ ಟೋಯಿಂಗ್ ಮಾಡಿ ದಂಡ ವಿಧಿಸಲಾಗುತ್ತದೆ ಎಂದರು.
ಇನ್ನು ನಗರದಲ್ಲಿ ರಸ್ತೆ ಉಬ್ಬುಗಳು ಹೆಚ್ಚಾಗುತ್ತಿವೆ. ಅದರಿಂದಲೂ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಅದಕ್ಕೆ ಉತ್ತರಿಸಿದ ಕೆಲವು ರಸ್ತೆಯಲ್ಲಿ ಮೀತಿಗಿಂತ ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಹೀಗಾಗಿ, ರಸ್ತೆಯ ಉಬ್ಬುಗಳನ್ನು ನಿರ್ಮಿಸಲಾಗಿದೆ ಎಂದರು.
ಪಾರ್ಕಿಂಗ್ ಸ್ಥಳದಲ್ಲಿಯೂ ಟೋಯಿಂಗ್ ಸಿಬ್ಬಂದಿ ವಾಹನ ಎತ್ತೂಯ್ಯುತ್ತಿದ್ದಾ. ಕೇವಲ ಐದು ಅಥವಾ ಹತ್ತು ನಿಮಿಷದ ಕೆಲಸಕ್ಕಾಗಿ ವಾಹನ ನಿಲ್ಲಿಸಿ ಕಚೇರಿಯೊಳಗೆ ಹೋಗಿ ಬರುವಷ್ಟರಲ್ಲೇ ವಾಹನ ಟೋಯಿಂಗ್ ಮಾಡಿರುತ್ತಾರೆ ಎಂದು ಸಾರ್ವಜನಿಕರು ಕೇಳಿದರು.
ಅದಕ್ಕೆ ಉತ್ತರಿಸಿ ಆಯುಕ್ತರು, ಸಂಚಾರ ನಿಯಮ ಉಲ್ಲಂಘಿಸಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದರೇ ವಾಹನ ಟೋಯಿಂಗ್ ಮಾಡುತ್ತಾರೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಂಚಾರ ನಿಯಮ ಮಾಡಲಾಗಿದೆ ಎಂದರು.
ಸಭೆಯಲ್ಲಿ ವೈದ್ಯರು, ಸರ್ಕಾರೇತರ ಸಂಸ್ಥೆಗಳು, ಎಂಜಿನಿಯರ್‌ಗಳು ಸೇರಿ ಸುಮಾರು ೧೫೦ಕ್ಕೂ ಅಧಿಕ ಮಂದಿ ಪಾಲ್ಗೊಂಡು, ಆಯುಕ್ತರಿಗೆ ಪ್ರಶ್ನೆಗಳನ್ನು ಕೇಳಿದರು.
ಸಭೆಯಲ್ಲಿ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ, ಮಡಿವಾಳ ಉಪವಿಭಾಗ ಎಸಿಪಿ ಶ್ರೀಧರ್ ಎಂ. ಹೆಗಡೆ,ಅವರಿದ್ದರು.