ಅಪಾಯಕಾರಿ ಘನತ್ಯಾಜ್ಯ ಸಂಸ್ಕರಣೆ ಖಾಸಗಿ ಕಂಪೆನಿಗಳ ಶ್ರಮ ಅಗತ್ಯ

ತುಮಕೂರು, ನ.೧೧- ಪರಿಸರ ಸ್ನೇಹಿಯಾಗಿ ಅಪಾಯಕಾರಿ ಘನತ್ಯಾಜ್ಯ ವಿಲೇವಾರಿ ಮಾಡಿ ಸಂಸ್ಕರಿಸುವಲ್ಲಿ ಖಾಸಗಿ ಕಂಪೆನಿಗಳು ಉತ್ತಮ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಹೇಳಿದರು.
ನಗರದ ಹೊರವಲಯದ ವಸಂತ ನರಸಾಪುರದ ಸೆಂಚುರಿ ಇಕೋ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ಮಂಡಳಿ ಅಧಿಕಾರಿಗಳು ಹಾಗೂ ಹಿರಿಯ ಪರಿಸರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಪರಿಸರಕ್ಕೆ ಮಾರಕವಾಗುವ ಘನತ್ಯಾಜ್ಯವನ್ನು ಸಂಸ್ಕರಿಸುವುದು ಸವಾಲಾಗಿ ಪರಿಣಮಿಸಿದೆ. ಸರ್ಕಾರದ ಜತೆಗೆ ಖಾಸಗಿ ಕಂಪೆನಿಗಳು ಕೈಜೋಡಿಸಿದಾಗ ಮಾತ್ರ ಘನತ್ಯಾಜ್ಯವು ಪರಿಸರಕ್ಕೆ ಮಾರಕವಾಗದಂತೆ ಸಂಸ್ಕರಿಸಬಹುದು ಎಂದರು.
ಸೆಂಚುರಿ ಇಕೋ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಅಪಾಯಕಾರಿ ಘನತ್ಯಾಜ್ಯವನ್ನು ಪರಿಸರ ಸ್ನೇಹಿಯಾಗಿ ಸಂಸ್ಕರಿಸುವಲ್ಲಿ ಅತ್ಯುತ್ತಮ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಘನತ್ಯಾಜ್ಯವನ್ನು ಸಂಸ್ಕರಿಸುವುದು ತಡ ಮಾಡಿದರೆ ಪ್ರಾಣಿ ಪಕ್ಷಿಗಳು ಮನುಷ್ಯನ ಮೇಲೆ ಗಂಭೀರವಾದ ಪರಿಣಾಮ ಉಂಟಾಗುವುದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ ಎಂದು ತಿಳಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಯತೀಶ್ ಮಾತನಾಡಿ, ಸೆಂಚುರಿ ಇಕೋ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಪರಿಸರ ಸ್ನೇಹಿಯಾಗಿ ಕೆಲಸ ಮಾಡುತ್ತಿರುವುದು ಪರಿಶೀಲನೆಯಲ್ಲಿ ಕಂಡು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಪರಿಸರ ಅಧಿಕಾರಿಗಳಾದ ಮಂಜುನಾಥ್, ಡಾ. ಸುರೇಶ್, ಅಶೋಕ್, ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಾಜೀದ್, ನಿರ್ದೇಶಕರಾದ ಜಾವೀದ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಂಪೆನಿಯ ಆವರಣದಲ್ಲಿ ಸಸಿ ನೆಡಲಾಯಿತು.