ಅಪಹರಣ: ಮೂವರು ಆರೋಪಿಗಳ ಬಂಧನ

ಕಲಬುರಗಿ,ಜು.27-ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚೌಡಾಪುರದಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ತಾವು ಸಿಬಿಐ ಅಧಿಕಾರಿಗಳೆಂದು ಹೆದರಿಸಿ 11.20 ಲಕ್ಷ ರೂ. ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಲಗಾಣಗಾಪುರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಗುಡೂರ್ ತಾಂಡಾ ನಿವಾಸಿ ರಾಮು ಪವಾರ್, ಜ್ಞಾನೇಶ ದೇಸು ಚವ್ಹಾಣ್, ಸ್ಟೇಷನ್ ಗಾಣಗಾಪುರದ ಬಸವರಾಜ ಗುರುಶಾಂತ ದಿಂಗೆ ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಜು.21 ರಂದು ರಾತ್ರಿ 10.30ರ ಸುಮಾರಿಗೆ ಚೌಡಾಪುರ ಗ್ರಾಮದಲ್ಲಿ ನಾಲ್ವರು ಅಪರಿಚಿತರು ” ನಾವು ಸಿಬಿಐ ಅಧಿಕಾರಿಗಳು ನೀವು ಮಟಕಾ ಬರೆದುಕೊಳ್ಳುವ ದಂಧೆ ನಡೆಸುತ್ತಿದ್ದಿರಿ ಎಂದು ತಿಳಿದು ಬಂದಿದೆ” ಎಂದು ಧಮಕಿ ಹಾಕಿ ಯಂಕಪ್ಪ ಹಣಮಂತ ದೇವಕರ್ ಎಂಬುವವರನ್ನು ಜೀಪಿನಲ್ಲಿ ಕೂರಿಸಿಕೊಂಡು ಮದರಾ (ಬಿ) ಕ್ರಾಸ್‍ಗೆ ಕರೆದುಕೊಂಡು ಹೋಗಿ 11.20 ಲಕ್ಷ ರೂ.ಕೊಟ್ಟರೆ ನಿನ್ನನ್ನು ಬಿಡುತ್ತೇವೆ ಎಂದು ಹೆದರಿಸಿದ್ದರು. ನಂತರ ಜನ ಸೇರಿದ್ದರಿಂದ ಯಂಕಪ್ಪ ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಿ.ಎಸ್.ಐ.ರಾಜಶೇಖರ ರಾಠೋಡ್, ಸಿಬ್ಬಂದಿಗಳಾದ ಪ್ರಭು, ನಿಂಗಪ್ಪ, ಮಲ್ಲಿಕಾರ್ಜುನ, ನಾಗೇಂದ್ರ, ಶಿವಾನಂದ ಅವರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.