ಅಪಹರಣ ಪ್ರಕರಣ: ೭ ಮಂದಿ ಸೆರೆ

ಮಂಗಳೂರು, ಎ.೨೮- ತಲಪಾಡಿ ಸಮೀಪದ ಕೆಸಿ ರೋಡ್ ಮತ್ತು ಹೊಸಂಗಡಿಯಲ್ಲಿ ನಡೆದ ಅಪಹರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಉಳ್ಳಾಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತರನ್ನು ಅತ್ತಾವರ ನಿವಾಸಿ ಅಹ್ಮದ್ ಇಕ್ಬಾಲ್ (೩೩), ಮಂಜೇಶ್ವರದ ನಿವಾಸಿಗಳಾದ ಯಾಕೂಬ್ (೩೩), ಉಮರ್ ನವಾಫ್ (೨೪), ನೌಶಾದ್ (೨೮), ಕಾಸರಗೋಡು ನಿವಾಸಿ ಸಂಶಿರ್ (೨೯), ಉಪ್ಪಳದ ಸಯ್ಯದ್ ಮುಹಮ್ಮದ್ ಕೌಸರ್ (೪೧), ಮತ್ತು ಶೇಖ್ ಮುಹಮ್ಮದ್ ರಿಯಾಝ್ (೨೮) ಎಂದು ಗುರುತಿಸಲಾಗಿದೆ. ಬಂಧಿತರಿಂದ ೩ ಕಾರು, ೧ ಬೈಕು, ೧೦ ಮೊಬೈಲ್ ಫೋನ್, ೨ ತಲ್ವಾರ್, ಒಂದು ಬಾಕು, ಆಸ್ತಿ ದಾಖಲೆಗಳು ಮತ್ತು ೧೨೦ ಗ್ರಾಂ ಚಿನ್ನದ ಹಾರವನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ ೨೨ ರಂದು ಅಹಮ್ಮದ್ ಅಶ್ರಫ್ ಅವರನ್ನು ಕೆಸಿ ರಸ್ತೆಯಿಂದ ಅಪಹರಿಸಲಾಗಿತ್ತು, ನಂತರ ಆರೋಪಿಗಳು ಅಶ್ರಫ್ ಅವರ ಸ್ನೇಹಿತ ಜಾವೇದ್ ಅವರನ್ನು ಹೊಸಂಗಡಿಯಿಂದ ಅಪಹರಿಸಿ ಬಳಿಕ ಅವರನ್ನು ಮನೆಯೊಂದರಲ್ಲಿ ಇರಿಸಿ ಅವರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಎರಡೂ ಕುಟುಂಬಗಳಿಂದ ಹಣ, ಮೂಲ ಆಸ್ತಿ ದಾಖಲೆಗಳಿಗೆ ಬೇಡಿಕೆ ಇಟ್ಟಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಆದರೆ ಏಪ್ರಿಲ್ ೨೪ ರಂದು ಸಂತ್ರಸ್ತರನ್ನು ತಲಾಪಡಿಯಿಂದ ರಕ್ಷಿಸಲಾಗಿತ್ತು.

ಸಂತ್ರಸ್ತ ಅಶ್ರಫ್ ಮತ್ತು ಜಾವೇದ್ ಅವರು ಎಂಸಿಟಿ ಟ್ರೇಡಿಂಗ್ ಕಂಪೆನಿ, ಎಂಸಿಟಿ ಟೋಲ್ ಡೀಲ್, ಸಿಪ್ಟೋ ಕರೆನ್ಸಿ ಮತ್ತು ಫೋರ್ಕ್ಸ್ ಟ್ರೇಡಿಂಗ್ ಕಂಪೆನಿಗೆ ಹಣ ಹೂಡಿಕೆ ಮಾಡಲು ಆರೋಪಿ ಇಕ್ಬಾಲ್ ಅವರನ್ನು ಕೇಳಿದ್ದು, ಒಂದು ವರ್ಷದಲ್ಲಿ ಹಣವು ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಅಶ್ರಫ್ ಮತ್ತು ಜಾವೇದ್ ಹೇಳಿದ್ದಾರೆ. ಹೂಡಿಕೆಯ ಸಲುವಾಗಿ ಇಕ್ಬಾಲ್ ಇನ್ನೊಬ್ಬ ಆರೋಪಿ ಯಾಕೂಬ್‌ನಿಂದ ೫ ಲಕ್ಷ ರೂ. ಪಡೆದಿದ್ದನು. ಲಾಭವನ್ನು ಸೇರಿಸಿ ಈ ಸಂತ್ರಸ್ಥರು ಇಕ್ಬಾಲ್‌ಗೆ ೯೯ ಲಕ್ಷ ರೂ. ಪಾವತಿಸಬೇಕಾಗಿತ್ತು. ಈ ಪೈಕಿ ಸಂತ್ರಸ್ಥರು ೧೦ ಲಕ್ಷ ರೂ. ನೀಡಿದ್ದರು. ಆದರೆ ಉಳಿದ ಹಣವನ್ನು ಒಂದೂವರೆ ವರ್ಷಗಳ ನಂತರವೂ ಅಶ್ರಫ್ ನೀಡುವಲ್ಲಿ ವಿಫಲವಾಗಿದ್ದಾನೆ. ಇದೇ ಕಾರಣಕ್ಕೆ ಅಶ್ರಫ್ ಮತ್ತು ಜಾವೇದ್‌ನ ಅಪಹರಣ ನಡೆಸಲಾಗಿದೆ. ಇಕ್ಬಾಲ್ ಅಪಹರಣಕ್ಕೆ ಸಂಚು ರೂಪಿಸಲು ಉಮರ್ ನವಾಫ್‌ನನ್ನು ಸಂಪರ್ಕಿಸಿದ್ದು ಸಂಚು ರೂಪಿಸಿದ ಬಳಿಕ ಉಮರ್ ನವಾಫ್‌ನ ಗ್ಯಾಂಗ್ ಈ ಅಪಹರಣ ನಡೆಸಿದೆ. ಆರೋಪಿ ಉಮರ್ ನವಾಫ್ ವಿರುದ್ಧ ಕೊಲೆ, ವಿವಿಧ ಪೊಲೀಸ್ ಠಾಣೆಯಲ್ಲಿ ದರೋಡೆ ಸೇರಿದಂತೆ ೧೦ ಪ್ರಕರಣಗಳು ದಾಖಲಾಗಿದೆ.

ಇನ್ನು ಆರೋಪಿಗಳಲ್ಲಿ ಒಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಚೇತರಿಸಿಕೊಂಡ ನಂತರ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.