ಅಪಹರಣ ಪ್ರಕರಣ-ನಾಲ್ವರ ಬಂಧನ

ಕನಕಪುರ,ನ೧:ವ್ಯಕ್ತಿಯೊಬ್ಬ ನನ್ನು ಕಿಡ್ನಾಪ್ ಮಾಡಿದ ಆರೋಪದಡಿ ಅಪಹರಣ ಪ್ರಕರಣ ದಾಖಲಿಸಿಕೊಂಡಿರುವ ಕೋಡಿಹಳ್ಳಿ ಪೊಲೀಸರು ೪ ಮಂದಿ ಆರೋಪಿಗಳನ್ನು ಬಂಧಿಸಿದ್ದು ಪ್ರಕರಣದ ೬ ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಶೆಟ್ಟಿಕೆರೆದೊಡ್ಡಿ ಗ್ರಾಮದ ನಾಗರಾಜು ಎಂಬುವರು ಕಿಡ್ನಾಪ್ ಆಗಿದ್ದ ವ್ಯಕ್ತಿಯಾಗಿದ್ದಾರೆ.
ಇವರು ಶೆಟ್ಟಿಕೆರೆದೊಡ್ಡಿ ಗ್ರಾಮದ ಸುಖಾನಂದ ಮತ್ತು ಪುಟ್ಟೇಗೌಡ ಹಾಗೂ ೭ ಮಂದಿ ಸೇರಿ ಒಟ್ಟು ೯ ಮಂದಿ ತಮ್ಮನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಕೋಡಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಗರಾಜು ಅವರನ್ನು ಅಕ್ಟೋಬರ್ ೨೬ ರಂದು ಮುಳ್ಳಹಳ್ಳಿ ಗ್ರಾಮದ ಬಳಿ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ಇನೋವಾ ಕ್ರಿಸ್ಟ್ ಕಾರಿನಲ್ಲಿ ಬಂದ ೯ ಜನರು ಏಕಾಏಕಿ ತಮ್ಮನ್ನು ಕಾರಿನೊಳಗೆ ಎತ್ತಿಹಾಕಿಕೊಂಡು ಕಿಡ್ನಾಪ್ ಮಾಡಿದರು.
ಕಿಡ್ನಾಪ್ ಆದ ನಂತರ ಕಣ್ಣಿಗೆ ಬಟ್ಟೆಕಟ್ಟಿ ಅಪರಿಚಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕೈಕಾಲು ಕಟ್ಟಿ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ತಮ್ಮ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಅದರ ಮೂಲಕ ಖಾತೆಯಲ್ಲಿದ್ದ $ ೯೯ ಸಾವಿರ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
ತನ್ನ ಕೈಯಲ್ಲಿದ್ದ೧೦ ಗ್ರಾಂ ಚಿನ್ನದ ಉಂಗುರವನ್ನುಸಹ ಕಿತ್ತುಕೊಂಡು ನಂತರ ದಯಾನಂದ ಸಾಗರ್ ಆಸ್ಪತ್ರೆ ಬಳಿ ತಮ್ಮನ್ನು ಬಿಟ್ಟು ಪೊಲೀಸ್ ಠಾಣೆಗೆ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಪರಾರಿಯಾದರು, ತಮಗೆ ಜೀವ ಭಯವಿದೆ ಎಂದು ಸಂತ್ರಸ್ತ ನಾಗರಾಜು ಕೋಡಿಹಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗರಾಜು ನೀಡಿರುವ ದೂರಿನ ಮೇರೆಗೆ ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡಿರುವ ಕೋಡಿಹಳ್ಳಿ ಪಿಎಸ್‌ಐ ರವಿಕುಮಾರ್ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರುಗಳನ್ನು ಕೃತ್ಯ ನಡೆದ ಸ್ಥಳ ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
ಆನೇಕಲ್ ರಸ್ತೆಯ ಕಾಡುಜಕ್ಕಸಂದ್ರದ ಪಕ್ಕದಲ್ಲಿ ಕೃತ್ಯದ ಆರೋಪಿ ಶ್ರೀನಿವಾಸನಿಗೆ ಸೇರಿದ ತೋಟದ ಮನೆಯಲ್ಲಿ ನಾಗರಾಜುನನ್ನು ಕೂಡಿಹಾಕಿ ಕೈಕಾಲು ಕಟ್ಟಿ ದೊಣ್ಣೆಯಿಂದ ಹಲ್ಲೆ ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರು, ದೊಣ್ಣೆ ಮತ್ತು ಹಗ್ಗ ಮತ್ತು ವರ್ಗಾವಣೆ ಮಾಡಿಕೊಂಡಿದ್ದ ಹಣವನ್ನು ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉಳಿದ ೬ ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪತ್ತೆಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.