ಅಪಹರಣ: ನಾಲ್ವರಲ್ಲಿ ಇಬ್ಬರ ಸಾವು

ಮೆಕ್ಸಿಕೋ ಸಿಟಿ (ಮೆಕ್ಸಿಕೋ), ಮಾ.೮- ಕಳೆದ ವಾರ ಅಪಹರಣಕ್ಕೊಳಗಾಗಿದ್ದ ನಾಲ್ವರು ಅಮೆರಿಕನ್ ನಾಗರಿಕರ ಪೈಕಿ ಇದೀಗ ಇಬ್ಬರು ಮೃತಪಟ್ಟಿದ್ದು, ಉಳಿದಿಬ್ಬರ ಜೀವಂತವಾಗಿದ್ದು, ಸ್ವದೇಶಕ್ಕೆ ಮರಳುತ್ತಿದ್ದಾರೆ ಎಂದು ಎರಡೂ ದೇಶಗಳ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವನನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಕ್ಸಿಕೋದ ತಮೌಲಿಪಾಸ್‌ನ ಜೋಸ್ ಎನ್ (೨೪) ಎಂಬಾತನನ್ನು ಬಂಧಿಸಲಾಗಿದೆ. ಮಾರ್ಚ್ ೩ರಂದು ಅಮೆರಿಕಾದ ಟೆಕ್ಸಾಸ್ ಜೊತೆ ಗಡಿ ಹಂಚಿಕೊಳ್ಳುವ ಮೆಕ್ಸಿಕೋದ ಈಶಾನ್ಯ ರಾಜ್ಯವಾಗಿರುವ ತಮೌಲಿಪಾಸ್‌ನಲ್ಲಿರುವ ಮ್ಯಾಟಮೊರೊಸ್ ನಗರಕ್ಕೆ ವಾಹನದಲ್ಲಿ ತೆರಳುತ್ತಿದ್ದ ನಾಲ್ವರು ಅಮೆರಿಕನ್ ನಾಗರಿಕರನ್ನು ಶಸ್ತ್ರಸಜ್ಜಿತ ಗುಂಪೊಂದು ಅಪಹರಿಸಿತ್ತು. ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಪಡುವ ಹಿನ್ನೆಲೆಯಲ್ಲಿ ಈ ನಾಲ್ವರು ಮೆಕ್ಸಿಕೊಗೆ ತೆರಳುತ್ತಿದ್ದರು ಎಂದು ಅಮೆರಿಕನ್ ಮಾಧ್ಯಮಗಳು ವರದಿ ಮಾಡಿದೆ. ಈ ವೇಳೆ ಮೆಕ್ಸಿಕೋದ ಶಸ್ತ್ರಸಜ್ಜಿತ ಗುಂಪೊಂದು ಬಂದೂಕಿನಿಂದ ಬೆದರಿಸಿ ಅಪಹರಣ ನಡೆಸಿತ್ತು. ಸದ್ಯ ಮೃತಪಟ್ಟ ಇಬ್ಬರು ಅಮೆರಿಕನ್ ನಾಗರಿಕರನ್ನು ಜಿಂಡೆಲ್ ಬ್ರೌನ್ ಮತ್ತು ಷೀದ್ ವುಡಾರ್ಡ್ ಎಂದು ಗುರುತಿಸಲಾಗಿದೆ. ಇನ್ನು ಅಪಾಯದಿಂದ ಪಾರಾಗಿರುವ ದಕ್ಷಿಣ ಕ್ಯಾಲಿಫೋರ್ನಿಯಾ ಮೂಲದ ಲತಾವಿಯಾ ತೆ ಮೆಕ್‌ಗೀ ಹಾಗೂ ಎರಿಕ್ ಜೇಮ್ಸ್ ವಿಲಿಯಮ್ಸ್ ಎಂಬಿಬ್ಬರನ್ನು ಸದ್ಯ ಅಮೆರಿಕಾದ ಸುಪರ್ದಿಗೆ ಒಪ್ಪಿಸಲಾಗಿದ್ದು, ಇವರಿಗೆ ಸದ್ಯ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಯ ವೇಳೆ ಬದುಕುಳಿದಿರುವ ಇಬ್ಬರ ಪೈಕಿ ಓರ್ವ ಗಂಭೀರ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಇನ್ನು ಘಟನೆಯ ಬಗ್ಗೆ ಮೆಕ್ಸಿಕೋದ ಅಧ್ಯಕ್ಷ ಆಂಡ್ರೆಸ್ ಮ್ಯಾನುವೆಲ್ ಲೊಪೆಝ್ ಅವರು ತೀವ್ರ ಸಂತಾಪ ಹಾಗೂ ಖೇದ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದಲ್ಲಿ ಈ ರೀತಿಯ ಘಟನೆ ಸಂಭವಿಸಿದ್ದಕ್ಕಾಗಿ ನಾವು ತುಂಬಾ ವಿಷಾದಿಸುತ್ತೇವೆ. ಸಂತ್ರಸ್ತರ ಕುಟುಂಬಗಳು, ಸ್ನೇಹಿತರು ಮತ್ತು ಅಮೆರಿಕಾ ಸರ್ಕಾರಕ್ಕೆ ನಾವು ನಮ್ಮ ಸಂತಾಪವನ್ನು ಕಳುಹಿಸುತ್ತೇವೆ ಮತ್ತು ಶಾಂತಿ ಮತ್ತು ನೆಮ್ಮದಿಯನ್ನು ಖಾತರಿಪಡಿಸಲು ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ.
-ಆಂಡ್ರೆಸ್ ಮ್ಯಾನುವೆಲ್ ಲೊಪೆಝ್, ಮೆಕ್ಸಿಕೋ ಅಧ್ಯಕ್ಷ