ಅಪಹರಣವಾಗಿದ್ದ ಬಾಲಕನ ರಕ್ಷಣೆ

ಕಲಬುರಗಿ,ಜ.5-ಅಪಹರಣಕ್ಕೆ ಒಳಗಾಗಿದ್ದ ಶಾಲಾ ಬಾಲಕನನ್ನು ರಕ್ಷಣೆ ಮಾಡುವಲ್ಲಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಲಕನನ್ನು ಪಾಲಕರಿಗೆ ಒಪ್ಪಿಸಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.
ನಿನ್ನೆ ಮುಂಜಾನೆ 9 ಗಂಟೆ ಸುಮಾರಿಗೆ ಶಾಲೆಗೆ ಹೋಗುತ್ತಿದ್ದ ನಗರದ ಸಿದ್ದೇಶ್ವರ ಕಾಲೋನಿಯ ಸುದರ್ಶನ ಅನ್ನುವ 10 ವರ್ಷದ ಬಾಲಕನನ್ನು ಆಟೋದದಲ್ಲಿ ಅಪಹರಣ ಮಾಡಲಾಗಿತ್ತು. ಬಾಲಕನನ್ನು ಸಿನಿಮಿಯ ರೀತಿಯಲ್ಲಿ ಅಪಹರಿಸಿದ ಅಪಹರಣಕಾರರು ಕೆಲ ಹೊತ್ತಿನ ನಂತರ ಬಾಲಕನ ತಂದೆ ಗುರುನಾಥ ರಾಠೋಡ್ ಅವರಿಗೆ ಕರೆ ಮಾಡಿ ನಿಮ್ಮ ಮಗನನ್ನು ಅಪಹರಣ ಮಾಡಲಾಗಿದ್ದು, ನಿಮ್ಮ ಮಗ ಜೀವಂತ ಬೇಕಾದರೆ 10 ಲಕ್ಷ ಹಣ ನೀಡಬೇಕು, ಈ ವಿಷಯ ಪೊಲೀಸರಿಗೆ ತಿಳಿಸಿದರೆ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಗುರುನಾಥ ರಾಠೋಡ್ ಅವರು, ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಸಿಪಿಐ ಅರುಣ್ ಮುರಗುಡಿ ಮತ್ತು ಇತರ ಪೊಲೀಸ್ ಅಧಿಕಾರಿಗಳ ತಂಡ ಅಪಹರಣಕಾರರ ಪತ್ತೆಗೆ ಜಾಲ ಬೀಸಿತ್ತು.
ಪೊಲೀಸರು ತಮ್ಮನ್ನು ಶೋಧ ನಡೆಸುತ್ತಿರುವ ಮಾಹಿತಿ ಅರಿತ ಅಪಹರಣಕಾರರು ಮಗುವನ್ನು ಪಾಳಾ ಗ್ರಾಮದ ಹೊರ ವಲಯದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಮಗುವನ್ನು ರಕ್ಷಿಸಿರುವ ಪೊಲೀಸರು ಅವರ ಪಾಲಕರಿಗೆ ಮಗುವನ್ನು ಒಪ್ಪಿಸಿ ಅಪಹರಣಕಾರರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.