ಅಪರ ಜಿಲ್ಲಾಧಿಕಾರಿ ಅಮಾನತಿಗೆ ದಲಿತ ಸೇನೆ ಆಗ್ರಹ

ಕೋಲಾರ,ಏ.೨೯: ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ಅವರು ಕರ್ತವ್ಯ ಲೋಪವೆಸಗುತ್ತಿದ್ದು, ಅವರನ್ನು ಕೂಡಲೇ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಾರತೀಯ ದಲಿತ ಸೇನೆ ರಾಜ್ಯಾಧ್ಯಕ್ಷ ಮಹಾನ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಡಿಸಿಎಂ ಡಾ. ಅಶ್ವಥ್‌ನಾರಾಯಣ ರವರಿಗೆ ಮನವಿ ಸಲ್ಲಿಸಿದರು. ಕೋಲಾರ ಜಿಲ್ಲಾಸ್ಪತ್ರೆಗೆ ಕೋವಿಡ್ ನಿಯಂತ್ರಣ ಕುರಿತು ಪ್ರಗತಿ ಪರಿಶೀಲನೆ ನಡೆಸಲು ಆಗಮಿಸಿದ್ದ ವೇಳೆ ಮನವಿ ಪತ್ರ ಸಲ್ಲಿಸಿದರು.
ಕೋವಿಡ್ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕಾದ ಅಪರ ಜಿಲ್ಲಾಧಿಕಾರಿ ಡಾ ಸ್ನೇಹ ರವರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ನಿಯಮಗಳನ್ನು ಉಲ್ಲಂಘನೆ ಮಾಡಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬದಲು ಗುಂಪು ಚರ್ಚೆಯನ್ನು ನಡೆಸುತ್ತಿರುವುದು ಜನರಿಗೆ ಗಾಬರಿ ಹುಟ್ಟಿಸುವಂಥ ಸಂಗತಿಯಾಗಿದೆ ಎಂದು ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ ಇವರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಕರ್ತವ್ಯ ನಿರ್ವಹಣೆಯಲ್ಲಿ ಸಹ ಬೇಜವಾಬ್ದಾರಿಯಿಂದ ನಡೆದುಕೊಂಡು ಜನರಿಗೆ ಅನಾನುಕೂಲಗಳು ಉಂಟುಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಷ್ಟ್ರೀಯ ನಾಯಕರ ದಿನಾಚರಣೆ ಸಂದರ್ಭದಲ್ಲಿ, ಸಂಘ ಸಂಸ್ಥೆಗಳ ಜೊತೆ ಸಭೆ ನಡೆಸುವಾಗಲೂ ತಾತ್ಸಾರ ಭಾವನೆಯನ್ನು ತೋರುವುದು. ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರ ಜೊತೆ ಮಾತಾಡುವಾಗಲೂ ತುಂಬಾ ತಾತ್ಸಾರ ತೋರಿಸುವ ಗುಣ ಹೊಂದಿರುವ ಇವರು, ಬಡಬಗ್ಗರ ಕಷ್ಟ ನಷ್ಟಗಳ ಬಗ್ಗೆ ಕಾಳಜಿ ಇಲ್ಲದ ಅಧಿಕಾರಿ ಆಗಿದ್ದಾರೆ ಎಂದು ದೂರಿದರು.
ಆದುದರಿಂದ ಸಂಕಷ್ಟದ ಸಂದರ್ಭದಲ್ಲಿ ಬೇಜವಾಬ್ದಾರಿ ವರ್ತನೆ ತೋರಿದ ಅಪರ ಜಿಲ್ಲಾಧಿಕಾರಿ ಅವರನ್ನು ಕೂಡಲೇ ಅಮಾನತ್ತುಗೊಳಿಸಿ ವರ್ಗಾವಣೆ ಅಥವಾ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಆಗ್ರಹಿಸಿದರು.