ಅಪರೂಪದ ಮಹಾಶರಣೆ ಸಜ್ಜಲಗುಡ್ಡದ ಶರಣಮ್ಮ

ಕಲಬುರಗಿ:ಎ.5:ಈ ನಾಡು ಅನೇಕ ಜನ ಸಾಧು ಸಂತರು ಶರಣ ಶರಣೆಯರ ದಿವ್ಯ ಜೀವನವನ್ನು ಕಂಡಂತಹ ಪುಣ್ಯಭೂಮಿ ಆ ಮಹಾತ್ಮರು ತಮ್ಮ ಸಾಧನೆ ಸಿದ್ಧಿಗಳ ಮೂಲಕ ಇತಿಹಾಸದಲ್ಲಿ ದಾಖಲೆಗೊಂಡಿದ್ದಾರೆ. ಕೆಲವರು ಜನ್ಮತಃ ಮಹಾತ್ಮರಾದರೆ ಮತ್ತೆ ಕೆಲವರು ತಮ್ಮ ಸಾಧನೆಗಳ ಮೂಲಕ ಮಹಾತ್ಮರೆನಿಸಿಕೊಳ್ಳುತ್ತಾರೆ.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ದಿ: 04-04-2021 ರಂದು ಸಂಜೆ 6.00 ಗಂಟೆಗೆ ಲಿಂ. ಶ್ರೀ ಚನ್ನಬಸಪ್ಪಗೌಡ ಮಲ್ಲೆಶಪ್ಪಗೌಡ ಮಾಲಿಪಾಟೀಲ ರಬ್ಬನ ಹಳ್ಳಿ ಸ್ಮರಣಾರ್ಥ ಅರಿವಿನ ಮನೆ 664 ನೆಯ ದತ್ತಿ ಕಾರ್ಯಕ್ರಮದಲ್ಲಿ ಅನುಭಾವ ನೀಡುತ್ತಾ ಮಾತನಾಡಿದ ಲಿಂಗಸೂಗೂರಿನ ವಿಶ್ರಾಂತಿ ಶಿಕ್ಷಕರಾದ ಶ್ರೀ ಗಿರಿರಾಜ ಹೊಸಮನಿಯವರು “ಸಜ್ಜಲಗುಡ್ಡದ ಶರಣಮ್ಮನವರು 19 ನೆಯ ಶತಮಾನದ ಒಂದು ಅನಘ್ರ್ಯ ರತ್ನ ಗುರು ಕೃಪಾ ವಿಶೇಷದಿಂದ, ಕಠೋರವಾದ ಸಾಧನೆಯಿಂದ ಶಿವಯೋಗಕ್ಕೆ ಸಾಕಾರವಾದವರು. ಲಿಂಗಾಯತ ಪರಿಭಾಷೆಯಲ್ಲಿ ಹೇಳುವುದಾದರೆ ಶಿವಯೋಗಕ್ಕೆ ಭಾಷ್ಯೆಯಾಗಿ ಬದುಕಿದವರು. ಅವರು ಜನ್ಮತಃ ಉಚ್ಚ ಕುಲದಲ್ಲಿ ಹುಟ್ಟಿ ಬಂದವರಲ್ಲ. ಉನ್ನತವಾದ ಪರಂಪರೆಯಲ್ಲಿ ಬೆಳೆದು ಬಂದವರಲ್ಲ ಸಾಮಾನ್ಯ ಹಿಂದುಳಿದ ಕುಟುಂಬದಲ್ಲಿ ತಾಯಿ ಲಿಂಗಮ್ಮ ಮತ್ತು ತಂದೆ ಲಿಂಗಪ್ಪನವರ ಮಗಳಾಗಿ ಜನಿಸಿದ ಈ ತಾಯಿ ಮುಂದೆ ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡುತ್ತಾಳೆಂಬ ಕಲ್ಪನೆ ಯಾರಿಗೂ ಇರಲ್ಲಿಲ್ಲ. ರಾಯಚೂರು ಜಿಲ್ಲೆ ಕುಷ್ಟಗಿ ತಾಲೂಕಿನ ಮುದೇನೂರು ಅವರ ಜನ್ಮಭೂಮಿ. 1873 -1875 ಸುಮಾರಿನಲ್ಲಿ ಜನಿಸಿದ ಈ ತಾಯಿಗೆ ಒಬ್ಬ ಅಣ್ಣನೂ ಇದ್ದನು. ಆ ಊರಿನಲ್ಲಿ ಈ ಕುಟುಂಬಕ್ಕೆ ಅಲ್ಪ ಜಮೀನು ಸಹ ಇತ್ತು. ಕಾಲಾಂತರದಲ್ಲಿ ಬರಗಾಲ ಬಂದ ಪ್ರಯುಕ್ತ ಊರು ಬಿಟ್ಟು ಹೋಗುವ ಸಂದರ್ಭ ಬಂದುದರಿಂದ ಈ ಕುಟುಂಬ ಉಪಜೀವನಕ್ಕಾಗಿ ಮುದೇನೂರನ್ನು ತೊರೆಯುತ್ತಾರೆ. ಶರಣಮ್ಮನವರ ಮೂಲ ಹೆಸರು ಯಮುಯನಮ್ಮ. ಈ ಕುಟುಂಬ ಉದರ ಪೋಷಣೆಗಾಗಿ ಹಲವಾರು ಊರುಗಳಿಗೆ ಸುತ್ತುತ್ತಾರೆ. ಕಸಬಾ ಲಿಂಗಸೂಗೂರಿಗೆ ಬಂದು ಅಲ್ಲಿ ಹಲವಾರು ದಿನಗಳನ್ನು ಕಳೆಯುತ್ತಾರೆ. ಅಲ್ಲಿಯೂ ಹೊಟ್ಟೆ ಹೊರೆಯುವುದಕ್ಕೆ ಸಾಧ್ಯವಾಗದಿದ್ದಾಗ ಪಕ್ಕದ ಊರು ಮಾವಿನಬಾವಿಗೆ ಹೋಗಿ ನೆಲೆಸುತ್ತಾರೆ. ಈ ಕುಟುಂಬದ ಮೂಲ ಊರಾದ ಮುದೇನೂರಿನ ಅನೇಕ ಕುಟುಂಬಗಳು ಮಾವಿನ ಬಾವಿಯಲ್ಲಿ ಇರುತ್ತಾರೆ. ಹಲವಾರು ವರ್ಷ ಅವರ ಆಶ್ರಯದಲ್ಲಿ ನೆಲೆ ನಿಲ್ಲುತ್ತಾರೆ. ಹತ್ತೆಂಟು ವರ್ಷಗಳು ಅಲ್ಲಿ ನೆಲೆ ನಿಂತಾಗ ಯಮುನಮ್ಮನಿಗೆ ಹರೆಯದ ಪ್ರಾಯ, ಸ್ಫುರದ್ರೂಪಿಯಾದ ಇವರನ್ನು ನೋಡಿ ಕುಟಂಬದವರಿಗೆ ಮದುವೆ ಮಾಡುವ ವಿಚಾರ ಬರುತ್ತದೆ. ಆದರೆ ಮದುವೆ ಇಷ್ಟವಿಲ್ಲದ ಇವರು ತಾಯಿಯೊಂದಿಗೆ ಮುಂದಿನ ಊರಿಗೆ ಹೋಗುತ್ತಾರೆ. ಸಜ್ಜಲಗುಡ್ಡದ ಅನ್ನುವ ಊರಿಗೆ ಹೋಗಿ ಮಗಳು ತಂಗುತ್ತಾರೆ. ಈ ಮದ್ಯೆ ಅವರ ತಂದೆ-ಅಣ್ಣ ಅನಾರೋಗ್ಯದಿಂದ ಅಸು ನೀಗುತ್ತಾರೆ.

ಈ ಮದ್ಯೆ ಸಜ್ಜಲಗುಡ್ಡದ ಪಕ್ಕದ ಊರು ಕಂಬಳಿ ಹಾಳು ಎನ್ನುವ ಊರಿಗೆ ಗುಡ್ಡದೂರಿನ ದೊಡ್ಡ ಬಸವಾರಾರ್ಯರೆಂಬ ಒಬ್ಬ ಶರಣರು ಬರುತ್ತಿರುತ್ತಾರೆ. ಈ ವಿಷಯವನ್ನು ಮನಗಂಡ ಯಮುನಮ್ಮ ಅವರ ದರ್ಶನಕ್ಕೆ ಹೋಗಿ ತಮ್ಮ ಇಚ್ಚೆಯನ್ನು ಹೇಳುತ್ತಾರೆ. ಅವರು ಯಮುನಮ್ಮನಿಗೆ ಅನೇಕ ಪರೀಕ್ಷೆಗಳನ್ನು ಇಡುತ್ತಾರೆ. ಆ ಎಲ್ಲ ಪರೀಕ್ಷೆಗಳಲ್ಲಿ ಯಮುನಮ್ಮ ತೇರ್ಗಡೆ ಹೊಂದುತ್ತಾಳೆ. ದೊಡ್ಡ ಬಸವಾರ್ಯರನ್ನು ತಾಯಿ ಲಿಂಗಮ್ಮ ಪರಿ ಪರಿಯಾಗಿ ಬೇಡಿಕೊಂಡು ಮಗಳಿಗೆ ಲಿಂಗದೀಕ್ಷೆ ಕೊಡಲು ವಿನಂತಿಸುತ್ತಾಳೆ.

ನಂತರ ಲಿಂಗದೀಕ್ಷೆಯೂ ಆಗುತ್ತದೆ. ತನ್ನ ಜೀವನದ ಮಹತ್ವದ ಘಟ್ಟದಿಂದ ಅವರಿಗೆ ಶರಣಮ್ಮ ಎಂಬ ಅಭಿದಾನದಿಂದ ಹೆಸರುವಾಸಿಯಾಗಿ ಅನೇಕ ಜನರ ಕಣ್ಣು ತೆರೆಸುತ್ತಾಳೆ. ತನ್ನ ಅಧ್ಯಾತ್ಮಿಕ ಶಕ್ತಿಯಿಂದ ಬಳಿ ಬಂದ ಎಲ್ಲರಿಗೂ ಮಹಾಮಾತೆಯಾಗಿ ಜೀವನದ ಕಷ್ಟ-ಸುಖಗಳಿಗೆ ಪರಿಹಾರ ಹೇಳುತ್ತಾಳೆ.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ವೀರಣ್ಣ ದಂಡೆ, ಹಾಗೂ ದತ್ತಿ ದಾಸೋಹಿಗಳಾದ ಶ್ರೀ ರಮೇಶ ಸಿ. ಮಾಲಿಪಾಟೀಲ, ಶ್ರೀ ಶರಣಬಸಪ್ಪ ಸಿ.ಮಾಲಿಪಾಟೀಲ, ಶ್ರೀ ಬಸವರಾಜ ಸಿ.ಮಾಲಿ ಪಾಟೀಲ ಉಪಸ್ಥಿತರಿದ್ದರು. ಶ್ರೀ ಹೆಚ್.ಕೆ. ಉದ್ದಂಡಯ್ಯ ನಿರೂಪಿಸಿದರು.