ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಿದ ಕೆಎಂಸಿ ಆಸ್ಪತ್ರೆ

ಮಂಗಳೂರು, ಸೆ.೨೪- ತೀವ್ರ ಉಸಿರಾಟದ ತೊಂದರೆಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ೫೪ ವರ್ಷದ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಹೊನ್ನಾವರದ ಆಸ್ಪತ್ರೆಯೊಂದರಲ್ಲಿ ಪರೀಕ್ಷೆ ನಡೆಸಿದಾಗ ರೋಗಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ವೈದ್ಯರು ಚಿಕಿತ್ಸೆ ನೀಡಿದರೂ ಆರೋಗ್ಯ ಸುಧಾರಿಸಿರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಎಂಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ಕನ್ಸಲ್ಟಂಟ್ ಡಾ.ಹರೂನ್ ಎಚ್., ಇಂಟೆನ್ಸಿವಿಸ್ಟ್ ಡಾ.ದತ್ತಾತ್ರಯ ಪ್ರಭು ಹಾಗೂ ತುರ್ತು ಚಿಕಿತ್ಸಾ ತಂಡವು ರೋಗಿಯ ಆರೋಗ್ಯ ಸುಧಾರಣೆಗೆ ಅಗತ್ಯವಿರುವ ಚಿಕಿತ್ಸೆ ನೀಡಿತು. ಈ ಬಗ್ಗೆ ಮಾಹಿತಿ ನೀಡಿದ ಡಾ.ಹರೂನ್ ಎಚ್. ಅವರು, ‘ಕೆಎಂಸಿ ಆಸ್ಪತ್ರೆಗೆ ದಾಖಲಾದಾಗ ರೋಗಿಯು ಅತಿ ವೇಗವಾಗಿ ಉಸಿರಾಡುತ್ತಿದ್ದರು. ಹೀಗಾಗಿ ಅವರಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿತ್ತು. ಇದರೊಂದಿಗೆ ಅವರು ತೀವ್ರ ಸ್ವರೂಪದ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿದ್ದುದರಿಂದ ಅದಕ್ಕೆ ಸಂಬಂಧಿಸಿದಂತೆಯೂ ಚಿಕಿತ್ಸೆ ನೀಡಲಾಯಿತು ಎಂದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಸೈಟೋಕಿನ್ ಸ್ಟಾರ್ಮ್ ಸಮಸ್ಯೆಗೆ ತುತ್ತಾಗುವ ಸಾಧ್ಯತೆಯಿದ್ದು, ವೆಂಟಿಲೇಟರ್ ನೆರವಿನ ಅಗತ್ಯ ಕೂಡ ಇತ್ತು. ನಿರಂತರವಾದ ಚಿಕಿತ್ಸೆ ಮತ್ತು ವಿಶೇಷ ಕಾಳಜಿಯಯಿಂದಾಗಿ ರೋಗಿಯನ್ನು ವೆಂಟಿಲೇಟರ್ ಸಪೋರ್ಟ್‌ನಿಂದ ಹೊರಗೆ ಕರೆತರಲಾಯಿತು. ಆದರೆ, ಕೋವಿಡ್‌ನಿಂದಾಗಿ ಅವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಅಲ್ಲದೆ, ಆಹಾರ, ನೀರು ನುಂಗಲು ಆಗದೆ ಬಹಳ ಕಷ್ಟ ಅನುಭವಿಸುತ್ತಿದ್ದರು ಎಂದು ವಿವರಿಸಿದರು. ಮಂಗಳೂರಿನ ಕೆಎಂಸಿ ಹಾಸ್ಪಿಟಲ್‌ನ ಕನ್ಸಲ್ಟಂಟ್- ನರಶಾಸ್ತ್ರಜ್ಞ (ನ್ಯೂರೋಲಾಜಿಸ್ಟ್) ಡಾ.ರೋಹಿತ್ ಪೈ ಮಾತನಾಡಿ, ನೀರನ್ನು ಕುಡಿಯಲು ಅಥವಾ ನುಂಗಲು ತೊಂದರೆಯಾಗುತ್ತಿದೆ ಎಂದು ರೋಗಿಯು ನಮ್ಮ ಬಳಿ ಹೇಳಿದಾಗ ನರಸ್ನಾಯುವಿನ (ನ್ಯೂರೋಮಸ್ಕ್ಯುಲರ್) ಸಮಸ್ಯೆ ಇರಬಹುದು ಎಂದು ನಾವು ಊಹಿಸಿದೆವು. ಅಲ್ಲದೆ, ಅವರು ಕೋವಿಡ್ ಸಂಬಂಧಿ ಮೈಸ್ತೇನಿಯಾಗ್ರಾವಿಸ್‌ನಿಂದ ಕೂಡ ಬಳಲುತ್ತಿದ್ದರು. ಹೀಗಾಗಿ ಮೈಸ್ತೇನಿಯಾಗ್ರಾವಿಸ್ ಸಮಸ್ಯೆಗೆ ಚಿಕಿತ್ಸೆ ನೀಡಲು ಆರಂಭಿಸಿದಾಗ ರೋಗಿಯಲ್ಲಿ ಸಾಕಷ್ಟು ಚೇತರಿಕೆ ಲಕ್ಷಣಗಳು ಕಂಡುಬಂದವು ಎಂದು ಹೇಳಿದರು. ಕೆಎಂಸಿ ಹಾಸ್ಪಿಟಲ್‌ನ ತುರ್ತುಚಿಕಿತ್ಸೆ (ಕ್ರಿಟಿಕಲ್ ಕೇರ್) ವಿಭಾಗದ ಮುಖ್ಯಸ್ಥ ಡಾ.ದತ್ತಾತ್ರಯ ಪ್ರಭು ಮಾತನಾಡಿ, ಕೋವಿಡ್ ಗುಣವಾದ ನಂತರ ಕಾಣಿಸಿಕೊಳ್ಳುವ ಇನ್ಫೆಕ್ಷನ್ (ಸೋಂಕು) ನಿಂದ ಉಂಟಾಗುವ ನರಮಂಡಲ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಈ ರೀತಿಯ ಇನ್ನೂ ೨ ಕೇಸ್‌ಗಳು ಐಸಿಯುನಲ್ಲಿ ಇದ್ದವು. ವೆಂಟಿಲೇಟರ್‌ನಲ್ಲಿ ಇರುವ ರೋಗಿಗಳಲ್ಲಿ ಇಂತಹ ಸಮಸ್ಯೆಗಳ ಇರುವಿಕೆಯನ್ನು ಕಂಡು ಹಿಡಿಯುವುದು ಕಷ್ಟದ ಕೆಲಸ. ಆದರೆ, ಇಲ್ಲಿ ಗಮನಿಸಬೇಕಾಗಿರುವ ಪ್ರಮುಖ ಅಂಶವೇನೆಂದರೆ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆ ಇರುವುದು ದೃಢಪಟ್ಟ ಬಳಿಕ ರೋಗಿಗೆ ಅಗತ್ಯವಿದ್ದ ಎಲ್ಲ ರೀತಿಯ ಚಿಕಿತ್ಸೆ ನೀಡಲಾಯಿತು ಎಂದು ಮಾಹಿತಿ ನೀಡಿದರು. ಈ ಕುರಿತು ಮಾತನಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥರು ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಆನಂದ್ ವೇಣುಗೋಪಾಲ್, ರೋಗಿಯು ಕೋವಿಡ್‌ಗೆ ಸಂಬಂಧಿಸಿದ ಅತ್ಯಂತ ಅಪರೂಪದ ಮತ್ತು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದುದರಿಂದ ಇದೊಂದು ಕಠಿಣ ಮತ್ತು ಸವಾಲಿನ ಕೇಸ್ ಆಗಿತ್ತು. ರೋಗಿಗೆ ಐಸಿಯು ಮತ್ತು ವೆಂಟಿಲೇಟರ್ ನೆರವಿನ ಅಗತ್ಯವಿತ್ತು. ರೋಗಿಯು ಎದುರಿಸುತ್ತಿದ್ದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಗುರುತಿಸಿ, ಕೂಡಲೇ ಸ್ಪಂದಿಸಿ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗಿಯನ್ನು ಅಪಾಯದಿಂದ ಪಾರು ಮಾಡಲಾಯಿತು. ರೋಗಿಯನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಅವರ ಪ್ರಾಣ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಎದುರಾದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದರ ಮಹತ್ವ ಎಷ್ಟು ಎಂಬುದನ್ನು ಈ ಪ್ರಕರಣವು ತೋರಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.