ಅಪರಿಚಿತ ವಾಹನ ಡಿಕ್ಕಿ : ರಸ್ತೆ ದಾಟುತ್ತಿದ್ದ ಚಿರತೆ ಸಾವು

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಫೆ. ೮: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಡು ಚಿರತೆಯೊಂದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನ ಕರಕುಚ್ಚಿ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.ಆಯನೂರು – ಹಣಗೆರೆಕಟ್ಟೆ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಚಿರತೆಯು ರಸ್ತೆ ದಾಟಲು ಯತ್ನಿಸುತ್ತಿರುವ ವೇಳೆ ವಾಹನ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.ಚಿರತೆ ಮುಖಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸುಮಾರು ಒಂದೂವರೆ ವರ್ಷ ಪ್ರಾಯದ್ದಾಗಿದೆ. ಘಟನಾ ಸ್ಥಳಕ್ಕೆ ಶೆಟ್ಟಿಹಳ್ಳಿ ವನ್ಯಜೀವಿ ವಿಭಾಗದ ಡಿಎಫ್ಓ ಪ್ರಸನ್ನಕೃಷ್ಣ ಪಟೇಗಾರ್, ಆರ್.ಎಫ್.ಓ ವಿಜಯಕುಮಾರ್ ಮತ್ತವರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ನಿಯಮಾನುಸಾರ ಚಿರತೆಯ ಕಳೇಬರಕ್ಕೆ ಅಗ್ನಿಸ್ಪರ್ಶ ಮಾಡಿ ಸುಡಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.